ಬೆಂಗಳೂರು,ಏ 07(Daijiworld News/MSP): ರಾಜ್ಯ ಸರ್ಕಾರದಿಂದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಏ. 26 ರಂದು ಆಯೋಜಿಸಲಾಗಿದ್ದ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಮುಂದೂಡಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಜರಾಯಿ, ಮೀನುಗಾರಿಕೆ, ಬಂಧರು ಮತ್ತು ಒಳನಾಡ ಜಲ ಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ರಾಜ್ಯದಲ್ಲಿ ಸುಮಾರು 100ಕ್ಕೂ ಹೆಚ್ಚು ಎ ದರ್ಜೆಯ ದೇವಸ್ಥಾನ, ಇತರೆ ಆಯ್ದ ಇಲಾಖೆಯ ದೇವಸ್ಥಾನಗಳಲ್ಲಿ ಏಪ್ರಿಲ್ 26, 2020ರಂದು ನಡೆಸಲು ಆಯೋಜಿಸಲಾಗಿತ್ತು.
ಸಪ್ತಪದಿ ಸರಳ ಸಾಮೂಹಿಕ ವಿವಾಹಕ್ಕಾಗಿ ೨೦೦೦ಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದ್ದರು. ರಾಜ್ಯಾದ್ಯಾಂತ ಸಪ್ತಪದಿ ರಥಗಳು ಈ ಬಗ್ಗೆ ಪ್ರಚಾರ ನಡೆಸಿದ್ದವು. ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಸಾಕಷ್ಟು ಪೂರ್ವ ಸಿದ್ಧತೆ ಕೂಡ ನಡೆಸಲಾಗಿತ್ತು. ಪ್ರಥಮ ಹಂತದಲ್ಲಿ ಏಪ್ರಿಲ್ 26, 2020ರಂದು ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಜ್ಜುಗೊಂಡಿತ್ತು.
ಆದರೆ ಕೋವಿಡ್-19 ಸಮಸ್ಯೆಯ ಹಿನ್ನಲೆಯಲ್ಲಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ . ಮುಖ್ಯಮಂತ್ರಿಗಳು ಏ. 26 ರಂದು ನಡೆಸಲು ಉದ್ದೇಶಿಸಲಾಗಿದ್ದ ಕಾರ್ಯಕ್ರಮವನ್ನು ಎರಡನೇ ಹಂತದ ದಿನಾಂಕವಾದ ಮೇ 24, 2020ಕ್ಕೆ ನಡೆಸಲು ಸೂಚಿಸಿದ್ದಾರೆ. ಹೀಗಾಗಿ ಏಪ್ರಿಲ್ 26, 2020ರ ಸಪ್ತಪದಿ ಸರಳ ಸಾಮೂಹಿಕ ವಿವಾಹವನ್ನು ಮುಂದೂಡಿಕೆ ಮಾಡಲಾಗಿದೆ. ಈ ಬಗ್ಗೆ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂಬುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.