ಬೆಂಗಳೂರು, ಎ.07 (Daijiworld News/MB) : ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜ ಒಡೆಯುವ ಕೆಲಸ ಮಾಡುವವರನ್ನು ಸಹಿಸುವುದಿಲ್ಲ ಎಂದು ಹೇಳಿದ್ದು ವಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು, ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಯಡಿಯೂರಪ್ಪನವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ. ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಸೋಮವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮುದಾಯವೊಂದನ್ನು ಗುರಿಯಾಗಿಸಿ ಸಮಾಜ ಒಡೆಯುವ ಕೆಲಸದಲ್ಲಿ ತೊಡಗಿದವರನ್ನು ಸಹಿಸುವುದಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.