ನವದೆಹಲಿ, ಎ.07 (Daijiworld News/MB) : ಕೊರೊನಾ ಕುರಿತಾಗಿ ಸುಳ್ಳು ಸುದ್ದಿಗಳು ಹರಡುತ್ತಿರುವ ಕಾರಣದಿಂದಾಗಿ ವೈರಲ್ ಆಗಿರುವ ಫಾರ್ವರ್ಡ್ ಮೆಸೇಜ್ ಕಳುಹಿಸಲು ವಾಟ್ಸಪ್ ಮಿತಿ ಹೇರಿದೆ.
ಕೊರೊನಾ ಲಾಕ್ಡೌನ್ ಇರುವ ಕಾರಣದಿಂದಾಗಿ ಸಾಮಾಜಿಕ ಜಾಲತಾಣಗಳ ಜೊತೆ ಮೆಸೇಜಿಂಗ್ ಅಪ್ಲಿಕೇಶನ್ಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶ್ವದ ನಂಬರ್ ಒನ್ ಮೆಸೇಜಿಂಗ್ ಆಪ್ ವಾಟ್ಸಪ್ನಲ್ಲಿ ಸಂದೇಶಗಳೂ ಹೆಚ್ಚಾಗುತ್ತಿದೆ. ಅದರಲ್ಲೂ ಕೋಮು ದ್ವೇಷ ಬಿತ್ತುವಂತಹ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿದೆ.
ಸಂದೇಶಗಳ ಪೈಕಿ ಸುಳ್ಳು ಮಾಹಿತಿ ಇರುವ ಅತಿ ಹೆಚ್ಚು ಶೇರ್ ಆಗಿರುವ ಪೋಸ್ಟ್ ಗಳನ್ನು ನಿಯಂತ್ರಿಸಲು ಒಬ್ಬರಿಗೆ ಮಾತ್ರ ಕಳುಹಿಸಲು ವಾಟ್ಸಪ್ ಮಿತಿ ಹೇರಲಾಗಿದ್ದು ಎಂದು ತಿಳಿಸಿರುವ ವಾಟ್ಸಪ್ ವಕ್ತಾರರು ಅನಿರ್ಧಿಷ್ಟವಧಿಯವರೆಗೆ ಹೊಸ ಮಿತಿ ಜಾರಿಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ಭಾರತದಲ್ಲಿ ಗಲಭೆಗಳು ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಗರಿಷ್ಟ 20 ಜನರಿಗೆ ಸೆಂಡ್ ಮಾಡುವ ಮೆಸೇಜ್ಗಳ ಮಿತಿಯನ್ನು 5 ಜನರಿಗೆ ವಾಟ್ಸಪ್ ಇಳಿಸಿತ್ತು. ಇದರಿಂದಾಗಿ ಶೇ.25 ರಷ್ಟು ಸುಳ್ಳು ಸುದ್ದಿಗಳು ಹಂಚಿಕೆಯಾಗುವುದು ಕಡಿಮೆಯಾಗಿತ್ತು.
ಹಾಗೆಯೇ ಇದರೊಂದಿಗೆ ವೈರಲ್ ಆಗಿರುವ ಮತ್ತು ಅತಿ ಹೆಚ್ಚು ಶೇರ್ ಮಾಡಿರುವ ಮೆಸೇಜ್ಗಳನ್ನು ಬಳಕೆದಾರರರಿಗೆ ಸುಲಭವಾಗಿ ತಿಳಿಯಲು ಎರಡು ಬಾಣಗಳ (double arrows) ಐಕಾನ್ಗಳನ್ನು ಪರಿಚಯಿಸಿತ್ತು. ವೈರಲ್ ಮೆಸೇಜ್ ಸೆಂಡ್ ಮಾಡುವ ಸಮಯದಲ್ಲಿ ತೆರೆಯುವ ಪುಟದ ಆರಂಭದಲ್ಲಿ 'ಈ ಮೆಸೇಜ್ ಅತಿ ಹೆಚ್ಚು ಸಂಖ್ಯೆಯಲ್ಲಿ ಹಂಚಿಕೆಯಾಗಿದ್ದಕ್ಕೆ ಮಾರ್ಕ್ ಮಾಡಲಾಗಿದೆ' ಎಂದು ಬರೆದಿರುತ್ತದೆ. ಈ ಸಾಲನ್ನು ನೋಡಿಕೊಂಡು ಈ ಸಂದೇಶವನ್ನು ಕಳುಹಿಸಬೇಕೇ? ಬೇಡವೇ ಎಂದು ನಿರ್ಧರಿಸಿಬಹುದು.