ಬೆಂಗಳೂರು, ಎ.08 (Daijiworld News/MB) : ಲಾಕ್ಡೌನ್ ವಿಸ್ತರಣೆ ಬಗ್ಗೆ ಆರೋಗ್ಯ ತಜ್ಞರೊಂದಿಗೆ ಚರ್ಚಿಸಿದ ಬಳಿಕ ಮಾಡುವುದೋ ಬೇಡವೋ ಎಂಬ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ನಿಯಂತ್ರಣದ ಕುರಿತಾಗಿ ಆರೋಗ್ಯ ತಜ್ಞರ ತಂಡದೊಂದಿಗೆ ಚರ್ಚೆ ಮಾಡಿ ಅವರ ಸಲಹೆ ಪಡೆಯುತ್ತೇವೆ. ಎರಡು ದಿನಗಳಲ್ಲಿ ಡಾ.ಸಿ.ಎನ್. ಮಂಜುನಾಥ್ ಹಾಗೂ ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿಯು ವರದಿ ನೀಡುವ ನಿರೀಕ್ಷೆಯಿದೆ. ಬಳೀಕ ಲಾಕ್ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ರಾಜ್ಯದ ೧೨ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗದೇ ಇರುವುದು ಸಂತಸದ ಸಂಗತಿ. ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾದ ನಂಜನಗೂಡು, ಗೌರಿಬಿದನೂರು ಹಾಗೂ ಭಟ್ಕಳದಲ್ಲಿ ಹೊಸದಾಗಿ ಯಾವುದೇ ಪ್ರಕರಣ ವರದಿಯಾಗಿಲ್ಲ.ಇದು ಸಮಾಧಾನಕರ ವಿಷಯ ಎಂದರು.
ಈಗಾಗಲೇ ರಾಜ್ಯದಲ್ಲಿ 9 ಆಸ್ಪತ್ರೆಗಳನ್ನು ಕೋವಿಡ್–19 ಆಸ್ಪತ್ರೆಗಳು ಎಂದು ಗುರುತು ಮಾಡಲಾಗಿದ್ದು ಈಗ ಆ ಪಟ್ಟಿಗೆ ರಾಯಚೂರು, ಬೀದರ್, ಕೊಡಗು, ಮಂಡ್ಯ, ಹಾಸನ, ಬೆಳಗಾವಿ, ಧಾರವಾಡ ಹಾಗೂ ಕೊಪ್ಪಳ ಜಿಲ್ಲಾ ಆಸ್ಪತ್ರೆಗಳನ್ನೂ ಸೇರ್ಪಡೆ ಮಾಡಲಾಗಿದೆ. ಇದರಿಂದಾಗಿ ಹಿಂದೆ ಇದ್ದ 2,490 ಹಾಸಿಗೆಗಳ ಜತೆಗೆ 1,540 ಹಾಸಿಗೆಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ. ರಾಜ್ಯದಲ್ಲಿ ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. 3 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಹಾಗೆಯೇ ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, "ಪ್ರತಿನಿತ್ಯ 600 ಮಂದಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆ ಮಾಡಬಹುದಾಗಿದೆ. ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯು (ಎನ್ಐವಿ) ಪ್ರತಿ ವಾರ ಪರೀಕ್ಷಾ ಕಿಟ್ಗಳ ಅಗತ್ಯತೆ ಬಗ್ಗೆ ಮಾಹಿತಿ ಪಡೆದು, ಪೂರೈಕೆ ಮಾಡುತ್ತಿದೆ. ಸದ್ಯಕ್ಕೆ ಪರೀಕ್ಷಾ ಕಿಟ್ಗಳ ಕೊರತೆಯಿಲ್ಲ" ಎಂದು ತಿಳಿಸಿದರು.