ತಿರುವನಂತಪುರಂ, ಎ.08 (Daijiworld News/MB) : ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ನಲ್ಲಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಮಾರ್ಚ್ 15 ರಂದು ದೆಹಲಿಯಿಂದ ರೈಲಿನ ಮೂಲಕ ಎರ್ನಾಕುಳಂಗೆ 19 ವರ್ಷದ ವಿದ್ಯಾರ್ಥಿನಿ ತೆರೆಳಿದ್ದು ಮಾರ್ಚ್ 17 ರಂದು ಎರ್ನಾಕುಳಂಗೆ ತಲುಪಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಯಲ್ಲಿ ಯಾವುದೇ ಕೊರೊನಾ ಲಕ್ಷಣಗಳು ಕಂಡು ಬಂದಿರಲಿಲ್ಲ.
ಇನ್ನೋರ್ವರು 60 ವರ್ಷದ ವ್ಯಕ್ತಿ, ಮಾರ್ಚ್ 19 ರಂದು ದುಬೈನಿಂದ ಕೇರಳಕ್ಕೆ ಆಗಮಿಸಿದ್ದು ಸೋಂಕು ಇರುವ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ.
ಆದರೆ ದೆಹಲಿ ಹಾಗೂ ದುಬೈನಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಇರುವ ಕಾರಣದಿಂದಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಬ್ಬರನ್ನು 28 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.
14 ದಿನಗಳು ಕಳೆದ ಬಳಿಕ ಅವರ ಗಂಟಲಿನ ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎಎನ್ ಶೀಜಾ ತಿಳಿಸಿದ್ದಾರೆ.
ಹಾಗೆಯೇ ಕೊರೊನಾ ಸೋಂಕಿನ ಬಗ್ಗೆ ಜನತೆ ಇನ್ನಷ್ಟು ಎಚ್ಚರವಾಗಿರಬೇಕು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ ಎಂದು ಜಿಲ್ಲಾಧಿಕಾರಿ ಪಿಬಿ ನೂಹ್ ಹೇಳಿದ್ದಾರೆ.