ನವದೆಹಲಿ, ಎ.08 (Daijiworld News/MB) : ಲಾಕ್ಡೌನ್ ಇರುವ ಕಾರಣದಿಂದಾಗಿ ಹಿಂದೂ ಮಹಿಳೆಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕೊಂಡೊಯ್ಯಲು ಯಾವುದೇ ವಾಹನಗಳು ಇಲ್ಲದ ಕಾರಣ ನೆರೆಹೊರೆಯ ಮುಸ್ಲಿಂ ಯುವಕರು ಚಟ್ಟ ಹೊತ್ತು ಸ್ಮಶಾನಕ್ಕೆ ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಕೊರೊನಾ ವೈರಸ್ ಭಯದಿಂದಾಗಿ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಸಂಬಂಧಿಕರು ಭಾಗಿಯಗಿಲ್ಲ. ಈ ಸಂದರ್ಭದಲ್ಲಿ ಊರಿನ ಮುಸ್ಲಿಂ ಯುವಕರು ಮಹಿಳೆಯ ಮಕ್ಕಳ ನೆರವಿಗೆ ಬಂದಿದ್ದಾರೆ.
ಈ ಯುವಕರು ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿದ್ದು ಮಾಸ್ಕ್ ಧರಿಸಿ 2.5 ಕಿಮೀ ದೂರದಲ್ಲಿರುವ ಸ್ಮಶಾನಕ್ಕೆ ಚಟ್ಟ ಹೊತ್ತು ಸಾಗಿದ್ದಾರೆ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದೀಗ ಮುಸ್ಲಿಂ ಯುವಕರು ಚಟ್ಟ ಹೊತ್ತು ಸಾಗುತ್ತಿರುವ ಫೋಟೋ ವೈರಲ್ ಆಗಿದೆ. ಇನ್ನು ಈ ಮುಸ್ಲಿಂ ಯುವಕರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಹಿರಿಯ ಮುಖಂಡ, ಮಾಜಿ ಮುಖ್ಯಮಂತ್ರಿ ಕಮಲ್ನಾಥ್, ಈ ಯುವಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 65 ರ ಹರೆಯದ ಮಹಿಳೆ ಸೋಮವಾರ ಮೃತಪಟ್ಟಿದ್ದು ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
ಮಹಿಳೆಯ ಇಬ್ಬರು ಗಂಡು ಮಕ್ಕಳೊಂದಿಗೆ ಚಟ್ಟಕ್ಕೆ ಹೆಗಲುಕೊಟ್ಟ ಮುಸ್ಲಿಂ ಸಮುದಾಯದವರ ಕಾರ್ಯ ಶ್ಲಾಘನಾರ್ಹ. ಸಮಾಜಕ್ಕೆ ಅವರು ಮಾದರಿ. ನಮ್ಮ ಗಂಗಾ-ಜಮುನಿ ಸಂಸ್ಕೃತಿಯನ್ನು ಇದು ಬಿಂಬಿಸುತ್ತಿದ್ದು, ಈ ರೀತಿಯ ಕಾರ್ಯಗಳು ಪರಸ್ಪರ ಪ್ರೀತಿ ಮತ್ತು ಭ್ರಾತೃತ್ವವನ್ನು ಮೂಡಿಸುತ್ತವೆ ಎಂದು ಕಮಲ್ನಾಥ್ ಟ್ವೀಟಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮುಸ್ಲಿಂ ಯುವಕರು "ನಮಗೆ ಆ ಮಹಿಳೆ ಬಾಲ್ಯದಿಂದಲೇ ಪರಿಚಿತರು, ಇದು ನಮ್ಮ ಕರ್ತವ್ಯ" ಎಂದು ಹೇಳಿದ್ದಾರೆ.