ಗುಜರಾತ್, ಏ 08 (Daijiworld News/MSP): ವಿಶ್ವದಾದ್ಯಂತ ಕೊರೊನಾ ರಣಕೇಕೆ ಮುಂದುವರೆದಿದ್ದು, ಗುಜರಾತ್ನಲ್ಲಿ 14 ತಿಂಗಳ ಮಗು ಕೊರೊನಾ ವೈರಸ್ ಗೆ ಬಲಿಯಾಗಿದೆ.
ಕಳೆದೆರಡು ದಿನಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಾವನ್ನಪ್ಪಿದೆ. ಗುಜರಾತ್ ನ ಜಮಾ ನಗರದಲ್ಲಿ ಹಸುಗೂಸು ಕೊರೊನಾ ವೈರಸ್ ಗೆ ಬಲಿಯಾಗಿದ್ದು, ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.
ಪ್ರಯಾಣದ ಇತಿಹಾಸವಿಲ್ಲದ 14 ತಿಂಗಳ ಗಂಡು ಮಗುವಿನಲ್ಲಿ ಕರೋನವೈರಸ್ ಪಾಸಿಟಿವ್ ಬಂದ ಬಳಿಕ ಮಗುವಿಗೆ ಎಲ್ಲಿಂದ ಮಾರಕ ಕಾಯಿಲೆ ಹರಡಿತು ಎಂಬುವುದನ್ನು ಪತ್ತೆ ಹಚ್ಚಲು ಆರೋಗ್ಯ ಅಧಿಕಾರಿಗಳನ್ನು ತಂಡವನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.
ಮಗುವನ್ನು ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಇರುವ ವರದಿ ಭಾನುವಾರ ವೈದ್ಯರ ಕೈಸೇರಿದ್ದು ತಕ್ಷಣ ವೆಂಟಿಲೇಟರ್ ನಲ್ಲಿ ಮಗುವನ್ನು ಇರಿಸಿ ಚಿಕಿತ್ಸೆ ಪ್ರಾರಂಭಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮಂಗಳವಾರ ಸಾವನ್ನಪ್ಪಿದೆ.
ಮಗುವಿನ ಕಾರ್ಮಿಕ ಪೋಷಕರು ವಾಸಿಸುವ ಡೇರೆಡ್ ಹಳ್ಳಿಯಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಗುಜರಾತ್ ನಲ್ಲಿ ಮಂಗಳವಾರ 29 ಹೊಸ ಪ್ರಕರಣಗಳು ಸೇರಿ ಕರೋನವೈರಸ್ ರೋಗಿಗಳ ಸಂಖ್ಯೆ 175 ಕ್ಕೆ ಏರಿಕೆ ಕಂಡಿದೆ.