ಕಲಬುರ್ಗಿ, ಏ 08 (Daijiworld News/MSP):ಇಡೀ ವಿಶ್ವ ಮಹಾಮಾರಿ ಕೊರೋನಾ ಸೊಂಕಿನ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ರೈತ ಸಮುದಾಯ ಬೆಳೆ ಮಾರಾಟ ಮತ್ತು ಸೂಕ್ತ ಬೆಲೆ ಸಿಗಲಿಲ್ಲ ಅಂತ ಆತ್ಮಹತ್ಯೆಗೆ ಶರಣಾಗುವುದು ಪರಿಹಾರವಲ್ಲ. ಕೃಷಿ ಚಟುವಟಿಕೆಗೆ ನಿರಂತರ ಸಾಗಲು ಸರ್ಕಾರ ಎಲ್ಲಾ ಕ್ರಮ ಕೈಗೊಂಡಿದೆ. ರಾಜ್ಯದ ಅನ್ನದಾತ ಆತ್ಮ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ರೈತ ಸಮುದಾಯಕ್ಕೆ ಕರೆ ನೀಡಿದರು.
ಮಂಗಳವಾರ ಲಾಕ್ ಡೌನ್ ಪರಿಣಾಮ ಬೆಳೆದ ಕಲ್ಲಂಗಡಿಯನ್ನು ಮಾರಾಟ ಮಾಡಲು ಸಾಧ್ಯವಾಗದ ಕಾರಣ ಆತ್ಮಹತ್ಯೆಗೆ ಶರಣಾದ ಜಿಲ್ಲೆಯ ಆಳಂದ ತಾಲೂಕಿನ ಲಾಡ್ ಚಿಂಚೋಳಿ ಗ್ರಾಮದ ರೈತ ಚಂದ್ರಕಾಂತ ನಾಗೀಂದ್ರಪ್ಪ ಬಿರಾದರ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ ಸಚಿವರು ಸರ್ಕಾರದಿಂದ 5 ಲಕ್ಷ ರೂ.ಗಳ ಪರಿಹಾರ ಧನದ ಆದೇಶವನ್ನು ಮೃತ ರೈತನ ಪತ್ನಿಗೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅತ್ಮಹತ್ಯೆ ಪರಿಹಾರವಲ್ಲ. ಇದರಿಂದ ನಿಮ್ಮನೆ ನಂಬಿದ ಕುಟುಂಬಸ್ಥರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ರೈತಾಪಿ ವರ್ಗ ಆತ್ಮಹತ್ಯೆದಂತಹ ಕಠೋರ ನಿರ್ಣಯ ಕೈಗೊಳ್ಳಬಾರದು. ಸರ್ಕಾರ ನಿಮ್ಮೊಂದಿಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಅವರು ರೈತರಿಗೆ ಧೈರ್ಯ ತುಂಬಿದರು.
ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಲಾಕ್ ಡೌನ್ ಇದೆ. ಇಂತಹ ಸಂದರ್ಭದಲ್ಲಿಯೂ ರೈತನಿಗೆ ಮತ್ತು ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೃಷಿ ಸಂಬಂಧಿತ ಚಟುವಟಿಕೆಗಳ ಕಾರ್ಯಾರಂಭಕ್ಕೆ ಆದೇಶಿಸಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ವ್ಯವಸ್ಥೆ, ಪೂರಕ ಚಟುವಟಿಕೆಗಳು ನಿರಂತರ ಇರಲಿವೆ ಎಂದರು.
ಇದೀಗ ಎಲ್ಲೆಡೆ ಮಹಾಮಾರಿ ಕೊರೋನಾ ಸೋಂಕಿನ ಹರಡುತ್ತಿರುವುದರಿಂದ ಈ ಸೊಂಕು ತಗಲದಂತೆ ಮುಂಜಾಗ್ರತೆ ವಹಿಸಬೇಕು ಮತ್ತು ತಪ್ಪದೆ ಸಾಮಾಜಿಕ ಅಂತರದೊಂದಿಗೆ ಕೃಷಿ ಚಟುವಟಿಕೆಗಳನ್ನು ಮುಂದುವರೆಸಬೇಕು ಎಂದರು.