ನವದೆಹಲಿ, ಏ 08 (Daijiworld News/MSP): ದೇಶದಲ್ಲೂ ಕೊರೊನಾ ತನ್ನ ಅಟ್ಟಹಾಸವನ್ನು ಪ್ರಾರಂಭಿಸಿದ್ದು, ಕಳೆದ 12 ಗಂಟೆಗಳಲ್ಲಿ ಭಾರತವು 331 ಹೊಸ ಕರೋನವೈರಸ್ ಪ್ರಕರಣಗಳನ್ನು ದಾಖಲಿಸಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ. ಸಾವಿನ ಸಂಖ್ಯೆ 149 ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 5,194ಕ್ಕೆ ತಲುಪಿದೆ.
ಕೇಂದ್ರ ಆರೋಗ್ಯ ಸಚಿವಾಲಯದೊಂದಿಗೆ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ ದೇಶದಲ್ಲಿ 4643 ಸಕ್ರಿಯ ಪ್ರಕರಣಗಳಲ್ಲಿ 401 ಜನರನ್ನು ಗುಣಪಡಿಸಲಾಗಿದೆ ಎಂದಿದೆ.
ದೆಹಲಿ ಸಂಚಾರ ಪೊಲೀಸ್ ವಿಭಾಗದ ಎಎಸ್ಐ ಒಬ್ಬರಲ್ಲಿ ವೈರಸ್ ದೃಢಪಟ್ಟಿದೆ. ಏಪ್ರಿಲ್ 7 ರಂದು ಇವರಲ್ಲಿ ಅತೀವ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದುಕುಟುಂಬ ಸದಸ್ಯರನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ. ಗುಜರಾತ್ ನಲ್ಲಿ ಕೊರೊನಾಗೆ ೧೪ ತಿಂಗಳ ಮಗುವೆಂದು ಬಲಿಯಾಗಿದೆ.
ಈ ನಡುವೆ ೨೧ ದಿನಗಳ ಲಾಕ್ ಡೌನ್ ವಿಸ್ತರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರಗಳು ಮನವಿ ಸಲ್ಲಿಸಿದೆ. ಉತ್ತರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯವೂ ಏಪ್ರಿಲ್ 14 ರ ನಂತರ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ಲಾಕ್ಡೌನ್ ಮುಂದುವರಿದರೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಸುಲಭ ಎಂದು ಕೇಂದ್ರಕ್ಕೆ ತಿಳಿಸಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶವೂ ಸಹ ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿವೆ.