ನವದೆಹಲಿ, ಎ.08 (Daijiworld News/MB) : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು ಇದೀಗ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಸಂಸದರ ಸಂಬಳ, ಭತ್ಯೆ ಮತ್ತು ಪಿಂಚಣಿಯನ್ನು ಶೇ.30ರಷ್ಟು ಕಡಿತಗೊಳಿಸುವ ಸಂಸದರ ಸಂಬಳ, ಭತ್ಯೆ ಮತ್ತು ಪಿಂಚಣಿ ಕಾಯ್ದೆ 1954ರ ತಿದ್ದುಪಡಿ ಸುಗ್ರೀವಾಜ್ಞೆಗೆ ಮಂಗಳವಾರ ತಡರಾತ್ರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಏಪ್ರಿಲ್ 1ರಂದು ಜಾರಿಗೆ ಬರುವಂತೆ ಈ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಪ್ರತಿಯೊಬ್ಬ ಸಂಸದರು ಕ್ಷೇತ್ರದ ಭತ್ಯೆ ಹಾಗೂ ಕಚೇರಿ ಭತ್ಯೆ ಹೊರತುಪಡಿಸಿ ಪ್ರತಿ ತಿಂಗಳು ತಮ್ಮ ಸಂಬಳದಲ್ಲಿ 27 ಸಾವಿರ ರೂಪಾಯಿ ಕಡಿತಗೊಳ್ಳಲಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ವಿವರಿಸಿದೆ.
ಲೋಕಸಭೆಯ ಜಂಟಿ ಸಮಿತಿಯ ಶಿಫಾರಸ್ಸಿನ ಪ್ರಕಾರ, ಸಂಸದರ ಕ್ಷೇತ್ರ ಭತ್ಯೆಯಲ್ಲಿ ದೊರೆಯುವ 70 ಸಾವಿರ ರೂಪಾಯಿಯಲ್ಲಿ 21 ಸಾವಿರ ರೂಪಾಯಿ ಕಡಿತವಾಗಿ 49 ಸಾವಿರ ರೂಪಾಯಿ ಸಿಗಲಿದೆ. ಅಲ್ಲದೇ ಈ ಮೊದಲು ಲೇಖನ ಸಾಮಗ್ರಿಗೆ ದೊರೆಯುತ್ತಿದ್ದ 20 ಸಾವಿರ ರೂಪಾಯಿಯಲ್ಲಿ ಈಗ 14 ಸಾವಿರ ರೂಪಾಯಿ ಲಭ್ಯವಾಗಲಿದೆ ಎಂದು ತಿಳಿಸಿದೆ.
ಹಾಗೆಯೇ ಏಪ್ರಿಲ್ 1ರಿಂದ ಸಂಸದರ ಸಂಬಳ ಕಡಿತಗೊಳಿಸುವ ಬಗ್ಗೆ ಜಂಟಿ ಸಮಿತಿ ಶಿಫಾರಸು ಮಾಡಿರುವ ವರದಿಗೆ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ದು ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮ್ಮತಿ ಸೂಚಿಸಿರುವುದಾಗಿ ವರದಿ ತಿಳಿಸಿದೆ.