ರಾಯಬಾಗ, ಎ.08 (Daijiworld News/MB) : ಕೊರೊನಾ ಸೋಂಕಿತರು ವಾಸವಿದ್ದ ಪ್ರದೇಶದಲ್ಲಿರುವ ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲು ಆಶಾ ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬ ಅಂಗನವಾಡಿ ಕಾರ್ಯಕರ್ತೆ ಕುಡಚಿ ಪಟ್ಟಣಕ್ಕೆ ಮಂಗಳವಾರ ತೆರಳಿದ್ದು ಆ ಸಂದರ್ಭದಲ್ಲಿ ಹಲ್ಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಅಬ್ದುಲ್ಖಾದರ್ ಶಿರಾಜುದ್ದೀನ್ ರೋಹಿಲೆ (41), ಅತ್ತಾವುಲ್ ಅಲಿಯಾಸ್ ಅತ್ತಾಮದ್ಸಮದ್ ಶಾಬುದ್ದೀನ್ ಕಮಾಲಖಾನ್ (26), ಆಸೀಫ್ ಅನ್ವರ ಪಾಶ್ಚಾಪೂರೆ (32), ಶಿರಾಜುದ್ದೀನ್ ಇಮಾಮಸಾಬ ಬಿಸ್ತಿ (50) ಹಾಗೂ ಮುಜಮ್ಮಿಲ್ ಶಿರಾಜುದ್ದೀನ್ ಬಿಸ್ತಿ (25) ಎಂದು ಗುರುತಿಸಲಾಗಿದೆ.
ನವದೆಹಲಿಯ ತಬ್ಲೀಗ್ ಜಮಾತ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೂವರು ಮಹಿಳೆಯರು ಸೇರಿದಂತೆ ನಾಲ್ವರಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಅವರು ವಾಸವಿದ್ದ ಪ್ರದೇಶಗಳ ಜನರ ಆರೋಗ್ಯ ಮಾಹಿತಿ ಸಂಗ್ರಹಿಸಲು ಆಶಾ ಕಾರ್ಯಕರ್ತೆಯರಾದ ಹಾಲವ್ವಾ ಖಿಚಡೆ, ಛಾಯಾ ಪಾರ್ಥನಳ್ಳಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಅಂಜನಾ ಎನ್. ದೇಶಪಾಂಡೆ ತೆರಳಿದ್ದರು.
ಈ ಸಂದರ್ಭದಲ್ಲಿ ಸುಮಾರು 15 ಜನರ ಜೊತೆಗೂಡಿ ಆರೋಪಿಗಳು ತಮ್ಮನ್ನು ಅಡ್ಡಗಟ್ಟಿ, ವಿರೋಧ ಮಾಡಿದ್ದರು. ನಮ್ಮ ಕೈಯಿಂದ ಮೊಬೈಲ್ ಕಿತ್ತುಕೊಂಡರು. ಹಾಗೆಯೇ ಕೈಯಲ್ಲಿದ್ದ ಇತರ ದಾಖಲೆ ಪತ್ರ, ಕಾಗದಗಳನ್ನು ಹರಿದು ಹಾಕಿದರು. ಕೈ ಹಿಡಿದು ಎಳೆದಾಡಿದರು. ತಲೆಗೂದಲು ಜಗ್ಗಿ ಅವಮಾನಿಸಿದರು ಎಂದು ಅಂಜನಾ ದೇಶಪಾಂಡೆ ಪೊಲೀಸರಿಗೆ ದೂರು ನೀಡಿದರು.