ಬೆಂಗಳೂರು, ಏ 08 (Daijiworld News/MSP): ಕೊರೊನಾದಂತ ಮಾರಕ ರೋಗದ ಬಗ್ಗೆ ರಾಜಕೀಯ ಷಡ್ಯಂತ್ರಕ್ಕೆ ಬಳಸಿ ಒಂದು ಸಮುದಾಯವನ್ನು ಗುರಿಯಾಸಿ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಕೆ ನೀಡಿದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ಎಂ.ಪಿ.ರೇಣುಕಾಚಾರ್ಯ ಅವರನ್ನು ತಕ್ಷಣ ಬಂಧಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಹೊನ್ನಾಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಶಾಸನ ರಚಿಸುವ ಶಾಸನ ಸಭೆಗೆ ಬಂದಿದ್ದಾರೆ. ಈ ಇಬ್ಬರೂ ಶಾಸಕರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.. ರೇಣುಕಾಚಾರ್ಯ ಅವರಂತೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ. ಅವರನ್ನು ಈ ಹುದ್ದೆಯಿಂದ ಕೂಡಲೇ ವಜಾ ಮಾಡಬೇಕು. ಇವರಿಬ್ಬರೂ ಶಾಸಕರಾಗಿ ಇರಲು ಅರ್ಹರಲ್ಲ ಎಂದು ಹೇಳಿದ್ದಾರೆ
ಗುಂಡಿಕ್ಕಿ ಹತ್ಯೆ ಮಾಡಲು ತಿಳಿಸಿರುವಂತದ್ದು, ಪ್ರಚೋದನಾಕಾರಿ ಹೇಳಿಕೆಯಾಗುತ್ತದೆ. ಕಾನೂನಿನಡಿ ಕ್ರಿಮಿನಲ್ ಅಪರಾಧವಾಗುತ್ತದೆ. ಕೂಡಲೇ ಇಬ್ಬರ ವಿರುದ್ಧ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.