ನವದೆಹಲಿ, ಎ.08 (Daijiworld News/MB) : ಕೊರೊನಾ ಹಿನ್ನಲೆಯಲ್ಲಿ ಭಾರತೀಯ ರೈಲ್ವೆಯ ಸಹಸಂಸ್ಥೆಯಾಗಿರುವ ಐಆರ್ಸಿಟಿಸಿ ತನ್ನ ಪ್ರಯಾಣಿಕ ರೈಲು ಸೇವೆಗಳನ್ನು ಈ ತಿಂಗಳ 30ರವರೆಗೆ ರದ್ದುಪಡಿಸಿರುವುದಾಗಿ ಪ್ರಕಟಿಸಿದೆ.
ಆದರೆ ಐಆರ್ಸಿಟಿಸಿ ರೈಲುಗಳು ರದ್ದಾಗಿದ್ದರೂ, ಭಾರತೀಯ ರೈಲ್ವೆಯ ಸೇವೆ ಈ ಅವಧಿಯವರೆಗೆ ಸ್ಥಗಿತಗೊಳ್ಳುತ್ತದೆ ಎಂದು ಹೇಳಲಾಗದು ಎಂದು ಭಾರತೀಯ ರೈಲ್ವೆ ಹೇಳಿಕೆ ನೀಡಿದೆ.
ಐಆರ್ಸಿಟಿಸಿಗೆ ಕಾಶಿ ಮಹಾಕಾಲ ಎಕ್ಸ್ಪ್ರೆಸ್ (ವಾರಣಾಸಿಯಿಂದ ಇಂಧೋರ್) ಹಾಗೂ ಲಕ್ನೋ - ದೆಹಲಿ, ಅಹ್ಮದಾಬಾದ್ - ಮುಂಬೈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸೇವೆಯನ್ನು ರದ್ದು ಮಾಡಲು ಪೂರ್ಣ ಸ್ವಾತಂತ್ಯ್ರವಿದೆ. ಇತರ ಪ್ರಯಾಣಿಕ ರೈಲುಗಳಿಗೆ ಸಂಬಂಧಿಸಿದಂತೆ ಇದುವರೆಗೆ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ. ಲಾಕ್ಡೌನ್ ಮುಕ್ತಾಯಕ್ಕೆ ಇನ್ನೂ ಒಂದು ವಾರವಿದೆ. ಲಾಕ್ಡೌನ್ ತೆರವುಗೊಳಿಸಲಾಗುತ್ತದೆಯೇ ಅಥವಾ ಮುಂದುವರಿಸಲಾಗುತ್ತದೆಯೇ ಎಂಬುವುದರ ಮೇಲೆ ಇದು ನಿರ್ಧಾರವಾಗುತ್ತದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ನಡುವೆ ರೈಲ್ವೆ ಸಚಿವಾಲಯ ಲಾಕ್ಡೌನ್ ತೆರವುಗೊಳಿಸಿದ ಬಳಿಕ ತನ್ನ ಸೇವೆ ಪುನರ್ ಆರಂಭ ಮಾಡಲು ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲು ಸರಣಿ ಸಭೆಗಳನ್ನು ನಡೆಸುತ್ತಿದೆ.
ರೈಲು ಬೋಗಿಯ ಒಳಗಡೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲ ಅಗತ್ಯ ರೈಲುಗಳನ್ನು ಓಡಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿತಾಗಿ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.