ನವದೆಹಲಿ, ಏ 08 (Daijiworld News/MSP): ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ರಾಷ್ಟ್ರ ವ್ಯಾಪ್ತಿ ಹೇರಲಾದ ಲಾಕ್ ಡೌನ್ ಅನ್ನು ಏಪ್ರಿಲ್ 14 ರ ಬಳಿಕವೂ ವಿಸ್ತರಿಸಬೇಕಾಗಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ದೇಶದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಬುಧವಾರ 5,000 ಕ್ಕಿಂತ ಹೆಚ್ಚಾಗಿದೆ .ಏತನ್ಮಧ್ಯೆ, ಏಪ್ರಿಲ್ 14 ರ ನಂತರವೂ ಲಾಕ್ಡೌನ್ ಮುಂದುವರೆಸಬೇಕೇ ಬೇಡವೇ ಎಂಬ ವಿಚಾರವಾಗಿ ಪ್ರಧಾನಿ ಮೋದಿ ಅವರು ಇಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಸರ್ವಪಕ್ಷಗಳ ಸಭೆ ನಡೆಸಿದರು. ಲಾಕ್ ಡೌನ್ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ಪಡೆಯುವುದಾಗಿ ತಿಳಿಸಿದರೂ,ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮುಂದುವರೆಸುವುದು ಅತ್ಯಗತ್ಯ ಎಂದು ಸಭೆಯಲ್ಲಿ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಮಾರ್ಚ್ 25 ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿದ ನಂತರ ಪ್ರತಿಪಕ್ಷಗಳು ಸೇರಿದಂತೆ ದೇಶದ ನಾಯಕರೊಂದಿಗೆ ಪ್ರಧಾನಮಂತ್ರಿಯವರು ನಡೆಸಿದ ಮೊದಲ ಸಂವಾದ ಇದಾಗಿದೆ.
21 ದಿನಗಳ ಲಾಕ್ಡೌನ್ ಮುಂದಿನ ವಾರ ಕೊನೆಗೊಳ್ಳಲಿದೆ, ಆದರೆ ಹಲವು ಮುಖ್ಯಮಂತ್ರಿಗಳು ವಿಸ್ತರಣೆ ಅಥವಾ ನಿರ್ಬಂಧಗಳನ್ನು ಭಾಗಶಃ ಮುಂದುವರಿಸುವಂತೆ ಕೋರಿದ್ದಾರೆ, ಇಲ್ಲದಿದ್ದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವುದು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕದ ನಂತರ ಸಮಾಜದ ಜೀವನವು ಮತ್ತೆ ಒಂದೇ ರೀತಿ ಇರುವುದಿಲ್ಲ, ಸಾಮಾಜಿಕ ಮತ್ತು ವೈಯಕ್ತಿಕ ಬದಲಾವಣೆಗಳು ನಡೆಯಬೇಕಾಗಿದ್ದು ಪೂರ್ವ-ಕೊರೊನಾ ಮತ್ತು ನಂತರದ ಕೊರೊನಾ ಎಂದು ಬದಲಾಗುತ್ತದೆ ಎಂದು ತಿಳಿಸಿದ್ದಾರೆ.