ಭಟ್ಕಳ, ಏ 08 (Daijiworld News/MSP): ಭಟ್ಕಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟಿಸಿರು ಬಿಡುವಷ್ಟರಲ್ಲಿ ಬೆಚ್ಚಿಬೀಳಿಸುವ ಪ್ರಕರಣ ಪತ್ತೆಯಾಗಿದೆ. ಗಲ್ಫ್ ನಿಂದ ಹಿಂತಿರುಗಿದ ವ್ಯಕ್ತಿಯಲ್ಲಿರದ ಕೋವಿಡ್ -19 ಸೋಂಕು, ಆತನ 26 ವರ್ಷದ ಗರ್ಭಿಣಿ ಪತ್ನಿಯಲ್ಲಿ ಕಾಣಿಸಿಕೊಂಡಿದ್ದು ಭಟ್ಕಳದ ಜನರಲ್ಲಿ ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.
ಕಾರವಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮಂಗಳವಾರವಷ್ಟೇ ಉ.ಕ.ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನೀಡಿದ್ದರು. ಆದರೆ ಈ ಸುದ್ದಿ ಕೇಳಿ ನಿಟ್ಟಿಸಿರು ಬಿಡುವಷ್ಟರಲ್ಲೇ ಇದೊಂದು ಪ್ರಕರಣ ಎಲ್ಲರನ್ನು ಆತಂಕಕ್ಕೆ ತಳ್ಳಿದೆ.
ದುಬೈನಿಂದ ವಾಪಸ್ಸಾದ ಪತಿಯಲ್ಲಿ ಸೋಂಕು ಕಾಣಿಸಿಕೊಳ್ಳದೆ ಆತನ ಪತ್ನಿಯಲ್ಲಿ ಅದು ಕೂಡ ಸುಮಾರು ೧೦ ದಿನಗಳ ಬಳಿಕ ಸೋಂಕು ಇರುವುದು ದೃಢಪಟ್ಟಿದೆ. ಇದೊಂದು ಹೊಸ ರೀತಿಯ ಪ್ರಕರಣವಾಗಿದ್ದು ಈ ಕುರಿತಂತೆ ಬಾಧಿತ ಮಹಿಳೆಯ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವುದರ ಕುರಿತು ಜಿಲ್ಲಾಢಳಿತ ಹುಡುಕಾಟದಲ್ಲಿ ತೊಡಗಿದೆ.
ದುಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈಕೆಯ ಪತಿ, ಮಾರ್ಚ್ 17ರಂದು ಮುಂಬೈಗೆ ವಿಮಾನದ ಮೂಲಕ ಬಂದಿಳಿದಿದ್ದ. ಮುಂಬೈನಲ್ಲಿ ಸುಮಾರು ನಾಲ್ಕು ದಿನ ಉಳಿದಿದ್ದ ಈತ, ಆನಂತರ ರೈಲಿನಲ್ಲಿ ಭಟ್ಕಳಕ್ಕೆ ಬಂದಿದ್ದ. ಭಟ್ಕಳ ರೈಲು ನಿಲ್ದಾಣದಿಂದ ಸ್ನೇಹಿತನ ಬೈಕ್ ನಲ್ಲಿ ಮನೆಗೆ ತೆರಳಿದ್ದ. ದುಬೈನಿಂದ ಬಂದವನಾಗಿದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಈತನ ಕೈಗೆ ಹೋಂ ಕ್ವಾರಂಟೈನ್ ಮುದ್ರೆ ಹಾಕಿದ್ದರು. ಮಾ.31ರಂದು ಗರ್ಭಿಣಿ ಪತ್ನಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದ ಹಿನ್ನಲೆಯಲ್ಲಿ ಆಕೆಯನ್ನು ಈತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ.
ಆದರೆ, ಆಸ್ಪತ್ರೆಯ ಸಿಬ್ಬಂದಿ ಪತಿಯ ಕೈ ಮೇಲೆ ಕ್ವಾರಂಟೈನ್ ಮುದ್ರೆ ಇರುವುದನ್ನು ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ. ನಂತರ ಇಬ್ಬರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಇಬ್ಬರ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಪತ್ನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪತಿಯ ವರದಿ ನೆಗೆಟಿವ್ ಬಂದಿದೆ. ಇದೀಗ ಪತಿಯ ಗಂಟಲಿನ ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಸೋಂಕಿತ ಗರ್ಭಿಣಿ ಮಹಿಳೆಯನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಇನ್ನೊಮ್ಮೆ ಕಳುಹಿಸಲಾದ ಪತಿಯ ಗಂಟಲಿನ ದ್ರವದ ಮಾದರಿಯ ವರದಿ ಬರಬೇಕಿದ್ದು, ಅಲ್ಲಿಯವರೆಗೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.ಗರ್ಭಿಣಿಯ ಪತಿಯ ದೇಹದಲ್ಲಿ ಕೊರೊನಾ ವೈರಾಣು ಇದ್ದು, ರೋಗ ನಿರೋಧಕ ಶಕ್ತಿ ಅಧಿಕವಾಗಿರುವುದರಿಂದ ಅದು ಆತನಲ್ಲಿ ಕಾಣಿಸಿಕೊಳ್ಳದೇ ಇರಬಹುದು ಅಥವಾ ಆತನಲ್ಲಿದ್ದ ವೈರಾಣು ನಾಶವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಆತ 14 ದಿನಗಳ ಕ್ವಾರಂಟೈನ್ ಪೂರೈಸಿದ ಬಳಿಕ ಪತ್ನಿಯೊಂದಿಗೆ ಸಂಪರ್ಕ ಹೊಂದಿದ್ದು, ಈ ವೇಳೆ ಆಕೆಗೆ ಸೋಂಕು ತಗುಲಿರುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು ಅವರನ್ನು ನಿಗಾದಲ್ಲಿರಿಸಲಾಗಿದೆ