ಬೆಂಗಳೂರು, ಎ.09 (Daijiworld News/MB) : ರಾಜ್ಯದಿಂದ ದೆಹಲಿಯ ತಬ್ಲೀಗ್ ಜಮಾತ್ ಸಭೆಗೆ 1,300ಕ್ಕೂ ಹೆಚ್ಚು ಜನ ತೆರಳಿದ್ದು ಅವರೆಲ್ಲರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು 57 ವಿದೇಶಿಯರನ್ನು ಕ್ವಾರಂಟೈನ್ ಮಾಡಲಾಗಿದೆ. ವೀಸಾ ನಿಯಮ ಉಲ್ಲಂಘಿಸಿದ ಕಾರಣ ಕಪ್ಪು ಪಟ್ಟಿಗೆ ಸೇರಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶಿಯರಲ್ಲಿ 20 ಮಂದಿ ಇಂಡೋನೇಷ್ಯಾ, 1 ಇಂಗ್ಲೆಂಡ್, 4 ದಕ್ಷಿಣ ಆಫ್ರಿಕಾ, 3 ಜಾಂಬಿಯಾ, 19 ಕಿರ್ಗಿಸ್ತಾನ, 1 ಅಮೆರಿಕ, 1 ಫ್ರಾನ್ಸ್, 1 ಕೀನ್ಯಾ ಮತ್ತು 7 ಮಂದಿ ಬಾಂಗ್ಲಾದೇಶಕ್ಕೆ ಸೇರಿದವರಾಗಿದ್ದು ರಾಜ್ಯದ ವಿವಿಧ ಭಾಗಗಳಲ್ಲಿ ಇವರನ್ನು ಕ್ವಾರೆಂಟೈನ್ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್–19 ಹಾಟ್ಸ್ಪಾಟ್ ಎಂದು ಗುರುತಿಸಲಾದ ಪ್ರದೇಶಗಳ ಬಳಿ ಇದ್ದ 276 ತಬ್ಲೀಗ್ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಹಾಗೇಯೇ ಇದೇ ಹಿನ್ನೆಲೆ ಹೊಂದಿರುವ 482 ತಬ್ಲೀಗ್ ಜಮಾತ್ ಕಾರ್ಯಕರ್ತರನ್ನು ವಿವಿಧ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ 808 ತಬ್ಲೀಗ್ ಜಮಾತ್ ಕಾರ್ಯಕರ್ತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.