ಗದಗ, ಎ.09 (Daijiworld News/MB) : ಕೊರೊನಾ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ವೃದ್ಧೆ ಬುಧವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆ ಏಪ್ರಿಲ್ 4ರಂದು ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಸೋಂಕಿತ ವೃದ್ಧೆಯ ತಂಗಿ, ತಂಗಿಯ ಇಬ್ಬರು ಮಕ್ಕಳು ಹಾಗೂ ವೃದ್ಧೆಯ ಸಂಪರ್ಕಕ್ಕೆ ಬಂದಿದ್ದ 44 ಮಂದಿಯ ರಕ್ತ ಹಾಗೂ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಲ್ಲರನ್ನೂ ಜಿಲ್ಲಾ ಆಸ್ಪತ್ರೆ ಸಮೀಪ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆಯಲಾದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ, ನಿಗಾ ವಹಿಸಲಾಗಿದೆ. ಇವರ ವರದಿಗಳು ನೆಗೆಟಿವ್ ಬಂದಿದೆ. ವೃದ್ಧೆಯುವ ವಿದೇಶಕ್ಕೆ ತೆರಳಿರಲಿಲ್ಲ ಮತ್ತು ವಿದೇಶಕ್ಕೆ ತೆರಳಿದ್ದವರ ಸಂಪರ್ಕದ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ.
ಮಾರ್ಚ್ 23ರಂದು ವೃದ್ಧೆ ಗದುಗಿನ ಎಸ್.ಎಂ ಕೃಷ್ಣ ನಗರದಲ್ಲಿರುವ ಸಂಬಂಧಿಯೊಬ್ಬರ ಮನೆಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಅಲ್ಲಿಗೆ ಗೋವಾದಿಂದ ಬಂದಿದ್ದ ಜಿಲ್ಲೆಯ 7 ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿದ ಎರಡು ದಿನಗಳ ಬಳಿಕ ವೃದ್ಧೆಗೆ ಕೆಮ್ಮು, ಜ್ವರ ಕಾಣಿಸಿಕೊಂಡಿತ್ತು. ಸ್ಥಳೀಯ ವೈದ್ಯರ ಬಳಿ ಚಿಕಿತ್ಸೆ ಪಡೆದು, ನಂತರ ಅವರ ಸೂಚನೆಯಂತೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಸೋಂಕು ದೃಢಪಟ್ಟ ಬೆನ್ನಲ್ಲೇ, ವೃದ್ಧೆ ವಾಸವಿದ್ದ ಮತ್ತು ಅವರು ಭೇಟಿ ನೀಡಿದ ಪ್ರದೇಶದ 500 ಮೀಟರ್ ಸುತ್ತಳತೆಯನ್ನು ಜಿಲ್ಲಾಡಳಿತ ಕಂಟೈನ್ಮೆಂಟ್ ಪ್ರದೇಶವಾಗಿ ಘೋಷಿಸಿ, ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಈಕೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆ ಮಾಡಲು ಜಿಲ್ಲಾಡಳಿತವು ಟಾಸ್ಕ್ಫೋರ್ಸ್ ರಚಿಸಿದೆ.
ರಾಜ್ಯದಲ್ಲಿ ಈವರೆಗೆ 181 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಸಾವನ್ನಪ್ಪಿದ ವೃದ್ಧೆ ಸೇರಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ.