ನವದೆಹಲಿ, ಎ.09 (Daijiworld News/MB) : ನನ್ನ ಮೇಲೆ ನಿಮಗೆ ತುಂಬಾ ಪ್ರೀತಿ ಮತ್ತು ಗೌರವ ಇದ್ದರೆ, ನೀವು ಈ ಕೊರೊನಾ ಬಿಕ್ಕಟ್ಟು ಅಂತ್ಯವಾಗುವವರೆಗೆ ಕನಿಷ್ಠ ಒಂದು ಬಡ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಅದುವೇ ನೀವು ನನಗೆ ನೀಡುವ ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾನುವಾರ (ಏ.12) ಸಂಜೆ 5 ಗಂಟೆಗೆ ನಾಗರಿಕರು ತಮ್ಮ ಬಾಲ್ಕನಿಗಳಲ್ಲಿ ನಿಂತು ಗೌರವದಿಂದ ನಮ್ಮ ಪ್ರಧಾನಿಗೆ ನಮಸ್ಕರಿಸಬೇಕು. ಈ ಮನುಷ್ಯ ನಮಗಾಗಿ ಮತ್ತು ನಮ್ಮ ರಾಷ್ಟ್ರಕ್ಕಾಗಿ ತುಂಬಾ ಶ್ರಮಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈ ಪೋಸ್ಟರ್ ಅನ್ನು ಸಾಧ್ಯವಾದಷ್ಟು ಜನರಿಗೆ ಫಾರ್ವರ್ಡ್ ಮಾಡುವಂತೆಯೂ ಮನವಿ ಮಾಡಿಕೊಳ್ಳಲಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಮೋದಿ ಕೆಲವರು 5 ನಿಮಿಷಗಳ ಕಾಲ ನಿಂತು ಮೋದಿಯನ್ನು ಗೌರವಿಸುವ ಅಭಿಯಾನವನ್ನು ನಡೆಸುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮೊದಲ ನೋಟದಲ್ಲಿ ಮೋದಿಯನ್ನು ವಿವಾದಗಳಿಗೆ ಎಳೆಯುವ ಕಿಡಿಗೇಡಿತನದ ವರ್ತನೆಯಂತೆ ಇದು ಕಾಣುತ್ತಿದೆ ಎಂದು ಹೇಳಿದ್ದಾರೆ.