ಮಂಡ್ಯ, ಎ.09 (Daijiworld News/MB) : ನಮಗೆ ಕೊರೊನಾ ಸೋಂಕು ಇದೆ, ಕೈಗೆ ಅದಕ್ಕೆ ಸೀಲ್ ಹಾಕಿದ್ದಾರೆ. ನಾವು ಕ್ವಾರಂಟೈನ್ನಲ್ಲಿ ಇರಬೇಕೆಂದು ಹೇಳಿದ್ದಾರೆ. ನಮ್ಮನ್ನು ಮುಟ್ಟಿದರೆ ನಿಮಗೂ ಸೋಂಕು ಹರಡುತ್ತದೆ ಎಂದು ಬೆದರಿಕೆ ಹಾಕಿ ಯುವಕರು ಪರಾರಿಯಾದ ಘಟನೆ ಬುಧವಾರ ರಾತ್ರಿ ಮಂಡ್ಯದಲ್ಲಿ ನಡೆದಿದೆ.
ಈ ಕುರಿತಾಗಿ ಮಾಹಿತಿ ನೀಡಿದ ಕೆ.ಆರ್.ಪೇಟೆ ತಹಶೀಲ್ದಾರ್ ಎಂ.ಶಿವಮೂರ್ತಿ
ಮೈಸೂರು ಕಡೆಯಿಂದ ಕೆ.ಆರ್.ಪೇಟೆ ಕಡೆಗೆ ರಾತ್ರಿ 11 ಗಂಟೆ ವೇಳೆ ನಾಲ್ವರು ಯುವಕರು ಆಟೊದಲ್ಲಿ ಬಂದಿದ್ದು ಪೊಲೀಸ್ ಸಿಬ್ಬಂದಿ ಚೆಕ್ಪೋಸ್ಟ್ನಲ್ಲಿ ತಡೆದಾಗ, ಹತ್ತಿರ ಬಂದರೆ ಮುಟ್ಟಿ, ರೋಗ ಹರಡುವುದಾಗಿ ಬೆದರಿಕೆ ಹಾಕಿದರು.
ಬ್ಯಾರಿಕೇಡ್ಗಳನ್ನು ತಾವೇ ಪಕ್ಕಕ್ಕೆ ಸರಿಸಿ ಮುಂದಕ್ಕೆ ತೆರಳಿದರು. ಪೊಲೀಸರು ಆಟೊವನ್ನು ಹಿಂಬಾಲಿಸಿದರಾದರೂ, ಕತ್ತಲಲ್ಲಿ ರಾಜ್ಯ ಹೆದ್ದಾರಿ ಬಿಟ್ಟು ಹಳ್ಳಿ ರಸ್ತೆಯಲ್ಲಿ ತೆರಳಿದ ಕಾರಣ ಆಟೊ ಪತ್ತೆಯಾಗಿಲ್ಲ.
ಸ್ಥಳಕ್ಕೆ ಬಂದ ಕೆ.ಆರ್.ಪೇಟೆ ತಹಶೀಲ್ದಾರ್ ಎಂ.ಶಿವಮೂರ್ತಿ, ಪಟ್ಟಣ ಠಾಣೆ ಸಬ್ ಇನ್ಸ್ಪೆಕ್ಟರ್ ಬ್ಯಾಟರಾಯಗೌಡ ಚೆಕ್ಪೋಸ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ತಾಲ್ಲೂಕಿನ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ ಬಿಗಿಗೊಳಿಸಲಾಗಿದ್ದು ತಾಲ್ಲೂಕು ಪ್ರವೇಶ ಮಾಡಿರುವ ಅಪರಿಚಿತ ಯುವಕರನ್ನು ಪತ್ತೆ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.