ಲಕ್ನೋ, ಎ.09 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ವ್ಯಾಪಿಸುವುದನ್ನು ತಡೆಗಟ್ಟುವ ಸಲುವಾಗಿ ಮನೆಯಿಂದ ಹೊರಬರುವ ಸಂದರ್ಭ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯದ ಮುಖ್ಯ (ಗೃಹ) ಕಾರ್ಯದರ್ಶಿ ಅವಿನಾಶ್ ಅವಾಸ್ಥಿ ಅವರು, ರಾಜ್ಯದ ಜನರು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಯಾರು ಧರಿಸುವುದಿಲ್ಲವೋ ಅವರ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮನೆಯಿಂದ ಜನರು ಹೊರಬರುವ ಸಂದರ್ಭ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೂರು ಮಡಿಕೆಯ ಮಾಸ್ಕ್ಗಳನ್ನು ಧರಿಸುವಂತೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ, ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ಗಳನ್ನು ಜನರು ಧರಿಸಬಹುದಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ತಿಳಿಸಿದೆ.