ಭುವನೇಶ್ವರ, ಎ.09 (Daijiworld News/MB) : ಕೊರೊನಾ ವೈರಸ್ ತಡೆಗಟ್ಟಲೆಂದು ಜಾರಿ ಮಾಡಲಾಗಿರುವ ಲಾಕ್ಡೌನ್ ಮುಂದುವರಿಸುವ ಬಗ್ಗೆ ಈಗಾಗಲೇ ಚಿಂತನೆ ನಡೆಯುತ್ತಿದ್ದು ಈ ನಡುವೆ ಒಡಿಶಾ ಸರ್ಕಾರ ಏಪ್ರಿಲ್ 30ರವರೆಗೆ ಲಾಕ್ಡೌನ್ನ್ನು ವಿಸ್ತರಿಸಿದೆ.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಕ್ಡೌನ್ ವಿಸ್ತರಣೆಯ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತಾಗಿ ವಿಡಿಯೋ ಸಂದೇಶ ನೀಡಿರುವ ನವೀನ್ ಪಟ್ನಾಯಕ್, ಲಾಕ್ಡೌನ್ನ್ನು ಏಪ್ರಿಲ್ 30ರವರೆಗೆ ವಿಸ್ತರಣೆ ಮಾಡಲಾಗಿದೆ. ಮೊದಲ ಹಂತದ ಲಾಕ್ಡೌನ್ನಲ್ಲಿ ಜನರ ಶಿಸ್ತು ಮತ್ತು ಸಂಯಮ ಕಾಪಾಡಿರುವುದು ಕೊರೊನಾ ವಿರುದ್ಧ ಹೋರಾಟಕ್ಕೆ ಶಕ್ತಿ ನೀಡಿದಂತಾಗಿದೆ. ಪರಿಸ್ಥಿತಿ ಎದುರಿಸಲು ಲಾಕ್ಡೌನ್ ವಿಸ್ತರಿಸಲಾಗಿದೆ ಎಂದರು.
ಇಂತಹ ಸಂದರ್ಭದಲ್ಲಿ ಆರ್ಥಿಕತೆಯಲ್ಲಿ ಜನರ ಜೀವ ಅತೀ ಮುಖ್ಯ. ಆದ್ದರಿಂದ ರಾಷ್ಟ್ರಮಟ್ಟದಲ್ಲಿಯೂ ಲಾಕ್ಡೌನ್ ವಿಸ್ತರಿಸಬೇಕೆಂದು ಕೇಂದ್ರ ಸರಕಾರಕ್ಕೂ ಮನವಿ ಮಾಡಿದ್ದೇವೆ. ಶನಿವಾರ ನಡೆಯಲಿರುವ ಸಭೆಯಲ್ಲಿಯೂ ಈ ಕುರಿತಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಅಲ್ಲದೇ ಶಾಲಾ-ಕಾಲೇಜುಗಳಿಗೆ ಜೂನ್ 17ರವರಗೆ ರಜೆ ಘೋಷಿಸಲಾಗಿದೆ.
ಹಾಗೆಯೇ ರಾಜ್ಯಕ್ಕೆ ಯಾವುದೇ ರೈಲು ಅಥವಾ ವಿಮಾನ ಸೇವೆಯನ್ನು ಆರಂಭಿಸಬಾರದು ಎಂದು ಕೇಂದ್ರ ಸರಕಾರಕ್ಕೆ ನವೀನ್ ಪಟ್ನಾಯಕ್ ಮನವಿ ಮಾಡಿದ್ದಾರೆ.