ವಿಜಯಪುರ, ಎ.09 (DaijiworldNews/PY) : ತಬ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ನೀಡಿ, ಇದಕ್ಕೆ ಸಹಕರಿಸದಿದ್ದರೆ ಗುಂಡಿಕ್ಕಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಟ್ವೀಟ್ ಮಾಡಿದ್ದಾರೆ.
ಸಿಎಂ ಬಿಎಸ್ವೈ ಅವರು, ಕೊರೊನಾ ಸಂಬಂಧಪಟ್ಟಂತೆ ಅಲ್ಪಸಂಖ್ಯಾತರ ಬಗ್ಗೆ ಯಾವ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದ್ದರು. ಆದರೆ, ಬಸನಗೌಡ ಪಾಟೀಲ ಯತ್ನಾಳ್ ಅವರು ಸಿಎಂ ಅವರ ಮಾತಿಗೆ ಬೆಲೆ ನೀಡದೇ ಅಲ್ಪಸಂಖ್ಯಾತರ ವಿರುದ್ದ ಟ್ವೀಟ್ ಮಾಡಿದ್ದಾರೆ.
ಕೊರೊನಾ ಹಬ್ಬಿಸುವ ಮತಾಂಧರಿಗೆ ಕಾನೂನು ಕ್ರಮದ ಎಚ್ಚರಿಕೆ ಕೊಡಬೇಕು. ಅವರನ್ನು ಸಮರ್ಥಿಸುವ ಮಾನವೀಯತೆ ಇರದ ಧಾರ್ಮಿಕ ರಾಜಕೀಯ ನಾಯಕರಿಗೆ ಹೊರತು ದೇಶಭಕ್ತ ಸಮುದಾಯಗಳಿಗೆ ಅಲ್ಲ. ತಮ್ಲಿಘಿ ಜಮಾತ್ ಜಿಹಾದಿಗಳಿಗೆ ಅಂತಿಮ ಎಚ್ಚರಿಕೆ ನೀಡಿ, ಅವರು ಸಹಕರಿಸದಿದ್ದರೆ ಗುಂಡಿಕ್ಕಿ. ಇದು ನಿಮಗೆ ಪ್ರಚೋದನೆ ಎನಿಸಿದರೆ ನನ್ನ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ವಿಜಯಪುರ ಜಿಲ್ಲಾ ಬಿಜೆಪಿಯಲ್ಲೇ ಇದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ವಿಜಯಪುರ ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಯಾಸೀನ ಜವಳಿ ಯತ್ನಾಳ್ ಅವರು ನಮ್ಮ ನಾಯಕರಾದ ಯಡಿಯೂರಪ್ಪ ಅವರ ಹೆಸರು ಕೆಡಿಸಲು ಮುಂದಾಗಿದ್ದಾರೆ. ಅದಲ್ಲದೇ, ಕೋಮು ಸವಹಾರ್ದತೆ ಕೆಡಿಸುವ ಕುತಂತ್ರ ಇದಾಗಿದೆ. ಆದ್ದರಿಂದ ಯತ್ನಾಳ್ ಅವರು ಕೂಡಲೇ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಬಳಿ ಕ್ಷಮೆ ಕೇಳಬೇಕೆಂದು ಹೇಳಿದರು.
ಅಲ್ಲದೇ ಇತ್ತೀಚೆಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ದೇಶಕ್ಕೆ ಮಾರಕವಾಗಿರುವ ಕೊರೊನಾ ಸೋಂಕು ಹರಡುವವರು ದೇಶದ್ರೋಹಿಗಳು, ಅವರನ್ನು ಗುಂಡಿಟ್ಟು ಕೊಲ್ಲಬೇಕು ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು.