ನವದೆಹಲಿ, ಎ.09 (DaijiworldNews/PY) : ಕೊರೊನಾ ರೋಗಕ್ಕೆ ಇನ್ನೂ ಸೂಕ್ತವಾದ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ರೋಗದ ಚಿಕಿತ್ಸೆಗೆ ಇಂತಹ ಪರಿಸ್ಥಿತಿಯಲ್ಲಿ ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೊರೊಕ್ವಿನ್ ಉಪಯೋಗಿಸಲಾಗುತ್ತದೆ. ಈ ಮಧ್ಯೆ ಅಮೆರಿಕ ಭಾರತಕ್ಕೆ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ಮೇಲಿನ ರಫ್ತು ನಿಷೇಧಗೊಳಿಸದಿದ್ದರೆ ಪ್ರತೀಕಾರ ತೀರಿಸಿಕೊಳ್ಳುವ ಬೆದರಿಕೆ ಒಡ್ಡಿತ್ತು. ಅದೇ ಸಂದರ್ಭ ಪ್ರಧಾನಿ ಮೋದಿ ಅವರಿಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪತ್ರ ಬರೆದು ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಔಷಧಿ ರಫ್ತು ಮಾಡಲು ಮನವಿ ಮಾಡಿದ್ದಾರೆ. ಪತ್ರದಲ್ಲಿ ಅವರು ರಾಮಾಯಣದ ದೃಷ್ಟಾಂತವೊಂದನ್ನು ಉಲ್ಲೇಖ ಮಾಡಿದ್ದಾರೆ.
ರಾಮಾಯಣದಲ್ಲಿ ಶ್ರೀರಾಮನ ಪರಮಭಕ್ತನಾದ ಹನುಮಂತನು ಸಂಜೀವಿನಿ ಪರ್ವತದಿಂದ ಔಷಧ ತಂದು ರಾಮನ ಸಹೋದರನಾದ ಲಕ್ಷ್ಮಣನನ್ನು ಬದುಕಿಸಿದ್ದ. ಅದೇ ರೀತಿಯಾಗಿ ಜೀಸಸ್ ಕೂಡಾ ಅನಾರೋಗ್ಯ ಪೀಡಿತರನ್ನು ತನ್ನ ಆತ್ಮೀಯ ಸ್ಪರ್ಶದಿಂದ ಗುಣಪಡಿಸಿದ್ದ. ಇದೀಗ ಭಾರತ ಕೂಡಾ ಕೊರೊನಾಗೆ ಸಂಜೀವಿನಿಯಂತಿರುವ ಹೈಡ್ರಾಕ್ಸಿಕ್ಲೊರೊಕ್ವಿನ್ ಅನ್ನು ರಫ್ತು ಮಾಡಲು ಅನುವು ಮಾಡಿಕೊಡುವ ಮೂಲಕ ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದಂತೆ ನಮ್ಮ ದೇಶಕ್ಕೂ ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ಬಂದು ತಲುಪುವಂತಾಗಲಿ ಎಂದು ಬೋಲ್ಸನಾರೊ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾನುವಾರ ಕೊರೊನಾ ಜಾಗತಿಕ ಪಿಡುಗಿನ ಬಗ್ಗೆ ಪ್ರಧಾನಿ ಮೋದಿ ಹಾಗೂ ಬೋಲ್ಸನಾರೊ ಅವರು ಫೋನ್ ಮೂಲಕ ಸಂಭಾಷಣೆ ನಡೆಸಿದ್ದರು. ಆ ಸಂದರ್ಭ ಪ್ರಧಾನಿ ಮೋದಿ ಅವರಲ್ಲಿ ಬೋಲ್ಸನಾರೊ ಅವರು ಹೈಡ್ರಾಕ್ಸಿಕ್ಲೊರೊಕ್ವಿನ್ ಔಷಧ ರಫ್ತು ಮಾಡುವ ವಿಚಾರದ ಬಗ್ಗೆ ಮನವಿ ಮಾಡಿದ್ದರು. ಇದಾದ ಬಳಿಕ ಪತ್ರ ಬರೆದ ಅವರು ತಮ್ಮ ಪತ್ರದಲ್ಲಿ ರಾಮಾಯಣ ಹಾಗೂ ಬೈಬಲ್ ಅನ್ನು ಉಲ್ಲೇಖಿಸಿದ್ದಾರೆ.
ಇಲ್ಲಿಯವರೆಗೆ ಬ್ರೆಜಿಲ್ನಲ್ಲಿ 12056 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 553 ಮಂದಿ ಮೃತಪಟ್ಟಿದ್ದಾರೆ.