ಕೊಪ್ಪಳ, ಎ.09 (DaijiworldNews/PY) : ವೈದ್ಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಹಲವು ಸಿಬ್ಬಂದಿ ವರ್ಗ ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರ ಮೇಲೆ ಹಲ್ಲೆ ಮಾಡುವವರು ಸಮಾಜ ವಿರೋಧಿಗಳು ಹಾಗೂ ದೇಶದ್ರೋಹಿಗಳು, ಇಂತವರನ್ನು ಶಿಕ್ಷಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಹೇಳಿದರು.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ಮಾಡುವುದು ಒಳ್ಳೆಯದಲ್ಲ. ಕೊರೊನಾ ಪತ್ತೆ ಹಚ್ಚಲು ಅವರ ಹಗಲಿರುಳು ಶ್ರಮಿಸುತ್ತಿದ್ದಾರೆ. ಕೆಲವೆಡೆ ಅಂತವರ ಮೇಲೆ ಹಲ್ಲೆ ನಡೆಯುತ್ತಿವೆ. ಹಲ್ಲೆ ಮಾಡುವವರು ನಿಜಕ್ಕೂ ದೇಶದ್ರೋಹಿಗಳು. ಇಂತವರನ್ನು ಹಿಡಿದು ಲಾಕಪ್ನಲ್ಲಿ ಹಾಕಿ ಶಿಕ್ಷೆ ವಿಧಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ.
ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿತ್ತು. ಆದರೆ ದೆಹಲಿಯ ನಿಜಾಮುದ್ದೀನ್ನ ಜಮಾತ್ನಲ್ಲಿ ಪ್ರಾರ್ಥನೆಯು ಹಾಗೂ ಕಾಸರಗೋಡಿನಿಂದಾಗಿ ಕೊರೊನಾ ಸೋಂಕು ಹೆಚ್ಚಳವಾಗಿದೆ. ನಮಗೆ ಇದೇ ಸಮಸ್ಯೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕಾಗಿ ಹಲವಾರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದರು.
ರೈತರ ಕೃಷಿ ಉತ್ಪನ್ನಗಳಿಗೆ ಯಾವುದೇ ನಿರ್ಬಂಧವಿಲ್ಲ. ಲಾಕ್ಡೌನ್ ಇದ್ದರೂ ಸರ್ಕಾರವು ಅವರ ಉತ್ಪನ್ನ ಸಾಗಾಟಕ್ಕೆ ಅನುವು ಮಾಡಿಕೊಟ್ಟಿದೆ. ಸರಿಯಾಗಿ ಆದೇಶ, ನಿಯಾವಳಿಯನ್ನು ತಿಳಿದುಕೊಳ್ಳಬೇಕು. ಪ್ರತೀ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಇದೇ ಮಾಹಿತಿಯನ್ನು ನೀಡುತ್ತಿದ್ದೇನೆ. ರೈತರ ಉತ್ಪನಕ್ಕೆ ಯಾವುದೇ ನಿರ್ಬಂಧ ಹೇರುವಂತಿಲ್ಲ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಂಡು ಉತ್ಪನ್ನ ಮಾರಾಟಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚಿಸಬೇಕು. ತಕ್ಷಣವೇ ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಬೇಕು. ಸರ್ಕಾರ ಪ್ರಾರಂಭಿಸಿದ ಖರೀದಿ ಕೇಂದ್ಡರವನ್ನು ರೈತರ ಉತ್ಪನ್ನ ಖರೀದಿಗೆ ತಕ್ಷಣವೇ ತೆರೆಯಬೇಕು ಎಂದು ತಿಳಿಸಿದರು.