ನವದೆಹಲಿ, ಎ.10 (Daijiworld News/MB) : ಜನ್ಧನ್ ಖಾತೆಗೆ ಕೇಂದ್ರ ಸರ್ಕಾರವು ಹಣ ಜಮೆ ಮಾಡುವುದಕ್ಕೆ ಸಂಬಂಧಿಸಿ ಕೆಲವು ಗಾಳಿ ಸುದ್ದಿಗಳು ಹರಡುತ್ತಿದ್ದು ಇದಕ್ಕೆ ಮಹಿಳೆಯರು ಬಲಿಯಾಗಬಾರದು ಎಂದು ಹಣಕಾಸು ಸಚಿವಾಲಯವು ಮನವಿ ಮಾಡಿದೆ.
ಸಾಂದರ್ಭಿಕ ಚಿತ್ರ
ಜನ್ಧನ್ ಖಾತೆಗೆ ಹಾಕಿರುವ ಹಣವನ್ನು ತೆಗೆಯದಿದ್ದಲ್ಲಿ ಸರ್ಕಾರ ಹಣ ವಾಪಸ್ ಪಡೆಯಲಿದೆ ಎನ್ನುವ ವದಂತಿಗಳನ್ನು ನಂಬಬಾರದು ಎಂದು ಗರಿಷ್ಠ ಸಂಖ್ಯೆಯಲ್ಲಿ ’ಪ್ರಧಾನ ಮಂತ್ರಿ ಜನ್ಧನ್ ಯೋಜನೆ’ (ಪಿಎಂಜೆಡಿವೈ) ಖಾತೆಗಳನ್ನು ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೇಳಿಕೊಂಡಿದೆ.
ಈ ಕುರಿತಾಗಿ ಭರವಸೆ ನೀಡಿರುವ ಎಸ್ಬಿಐ, ನಿಮ್ಮ ಖಾತೆಯಲ್ಲಿನ ಹಣಕ್ಕೆ ನಿರ್ಬಂಧವಿಲ್ಲ. ಹಾಗೆಯೇ ಸರ್ಕಾರ ಅದನ್ನು ವಾಪಾಸ್ ಪಡೆಯುವುದಿಲ್ಲ ಎಂದು ಹೇಳಿದೆ.
ಸರ್ಕಾರ ಹಣ ವಾಪಾಸ್ ಪಡೆಯಲಿದೆ ಎಂಬ ಗಾಳಿ ಸುದ್ದಿ ಹರಡಿದ ಕಾರಣದಿಂದಾಗಿ ಫಲಾನುಭವಿಗಳು ಹಣ ಹಿಂದೆ ಪಡೆಯಲು ಬ್ಯಾಂಕ್ ಶಾಖೆಗಳಿಗೆ ಮುಗಿ ಬಿದ್ದಿದ್ದರು. ಈ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕೆ ಕಾಪಾಡಬೇಕಾದ ಸಾಮಾಜಿಕ ಅಂತರ ನಿಯಮದ ಉಲ್ಲಂಘನೆ ನಡೆದಿದೆ.
ಖಾತೆಗೆ ಜಮೆ ಮಾಡಿರುವ ₹ 500ಗಳನ್ನು ಫಲಾನುಭವಿಗಳ ಯಾವಾಗಲಾದರೂ ಹಿಂದೆ ಪಡೆಯಬಹುದಾಗಿದೆ. ಮೇ ಮತ್ತು ಜೂನ್ ತಿಂಗಳಲ್ಲಿಯೂ ₹ 500ರಂತೆ ಒಟ್ಟು ₹ 1,000 ಗಳನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ಹಣಕಾಸು ಸೇವೆಗಳ ಇಲಾಖೆ (ಡಿಎಫ್ಎಸ್) ತಿಳಿಸಿದೆ.
ಹಾಗೆಯೇ ಗ್ರಾಹಕರು ಮನೆ ಸಮೀಪದ ಎಟಿಎಂ, ಗ್ರಾಹಕರ ಸೇವಾ ಕೇಂದ್ರಗಳಿಂದಲೂ (ಸಿಎಸ್ಪಿ) ಖಾತೆಯಲ್ಲಿನ ಹಣ ಪಡೆಯಬಹುದಾಗಿದೆ.