ನವದೆಹಲಿ ,ಏ 10 (Daijiworld News/MSP): ದೇಶದಲ್ಲಿ ಕೊರೊನಾ ವೈರಸ್ ತನ್ನ ರಣಕೇಕೆಯನ್ನು ಮುಂದುವರೆಸಿದ್ದು, ಕಳೆದ 12 ಗಂಟೆಗಳಲ್ಲಿ 547 ಹೊಸ ಕೋವಿಡ್ -19 ಪ್ರಕರಣಗಳ ಹೆಚ್ಚಳದೊಂದಿಗೆ, ಶುಕ್ರವಾರದಂದು ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು 6,412 ಕ್ಕೆ ಏರಿದೆ.
ಕೊರೋನಾ ವೈರಸ್ ಹತ್ತಿಕ್ಕಲು ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಈಗಾಗಲೇ ಲಾಕ್ ಡೌನ್ ಮಾಡಿದೆ. ಆದರೂ, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದು, ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ 12 ಗಂಟೆಗಳಲ್ಲಿ 30 ಹೊಸ ಸಾವುಗಳು ವರದಿಯಾಗಿವೆ, ಭಾರತದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 199 ಆಗಿದೆ.ದೇಶದಲ್ಲಿ ಒಟ್ಟು 5,709 ಪ್ರಕರಣಗಳಲ್ಲಿ 504 ಜನರನ್ನು ಗುಣಪಡಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಸಚಿವಾಲಯದ ಮಾಹಿತಿಯಂತೆ 1,364 ಸೋಂಕಿತರು ಉಳ್ಳ ಮಹಾರಾಷ್ಟ್ರವು ಅತಿ ಹೆಚ್ಚು ಕೊರೊನಾ ಪೀಡನೆಗೊಳಗಾದ ರಾಜ್ಯವಾಗಿದೆ. ಇನ್ನು 834 ಪ್ರಕರಣಗಳೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ ಇದುವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 720 ಆಗಿದೆ.