ಅಸ್ಸಾಂ, ಎ.10 (DaijiworldNews/PY) : ಈಶಾನ್ಯ ರಾಜ್ಯದಲ್ಲಿ ಮಹಾಮಾರಿ ಕೊರೊನಾಕ್ಕೆ ಮೊದಲ ಬಲಿಯಾಗಿದ್ದು, ಕಳೆದ ಎರಡು ವಾರಗಳಿಂದ ಸೋಂಕಿನಿಂದ ಬಳಲುತ್ತಿದ್ದ ಅಸ್ಸಾಂ ರಾಜ್ಯದ ಹೈಲಂಕಡಿ ಜಿಲ್ಲೆಯ 65 ವರ್ಷದ ವೃದ್ಧರೋರ್ವರು ಶುಕ್ರವಾರ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಸ್ಸಾಂನ ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಶರ್ಮಾ, ಅಸ್ಸಾಂ ರಾಜ್ಯದಲ್ಲಿ ಕೊರೊನಾ ವೈರಸ್ಗೆ ಮೊದಲ ಬಲಿಯಾಗಿದೆ ಎಂದು ನಾನು ತಿಳಿಸಲು ವಿಷಾಧಿಸುತ್ತೇನೆ. ದೇವರು ಆ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
ದೆಹಲಿಯ ಧಾರ್ಮಿಕ ಸಭೆಯಲ್ಲಿ ಈ ವೃದ್ದ ಪಾಲ್ಗೊಂಡಿದ್ದು, ಅಲ್ಲದೇ, ಕೆಲ ತಿಂಗಳ ಹಿಂದೆಯಷ್ಟೆ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಹಿಂದಿರುಗಿದ್ದರು ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.
ಹೈಲಕಂಡಿ ಗ್ರಾಮವನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ. ಈಗಾಗಲೇ ಅಸ್ಸಾಂನಲ್ಲಿ 29 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.