ಮುಂಬೈ, ಎ.10 (Daijiworld News/MB) : ಲಾಕ್ಡೌನ್ ಸಮಯದಲ್ಲಿ ಖಂಡಾಲಾದಿಂದ ಮಹಾಬಲೇಶ್ವರ್ಗೆ ಸಂಚರಿಸಲು 23 ಮಂದಿ ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡಿದ ಆರೋಪದ ಮೇಲೆ ಹಿರಿಯ ಪೊಲೀಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಮತ್ತೊಬ್ಬ ಅಧಿಕಾರಿಗೆ ಗೃಹಸಚಿವಾಲಯದ ಜವಾಬ್ದಾರಿ ವಹಿಸಿದೆ.
ಈ ಕುರಿತಾಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಗೃಹ ಸಚಿವ ಅನಿಲ್ ದೇಶಮುಖ್, "ಈ ಕೂಡಲೇ ಜಾರಿಗೆ ಬರುವಂತೆ ಅಮಿತಾಬ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿ ವಿಚಾರಣೆಗೆ ಆದೇಶ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಅಮಿತಾಬ್ ಗುಪ್ತಾ ಅವರು ಏಪ್ರಿಲ್ 8ರಂದು ಖಾಸಗಿ ಹಣಕಾಸು ಸಂಸ್ಥೆ ಡಿಎಚ್ಎಫ್ಎಲ್ ಸಂಸ್ಥೆಯ ವಾಧವನ್ ಕುಟುಂಬದ 23 ಮಂದಿಗೆ ಮುಂಬೈನ ಖಂಡಾಲ ಪ್ರದೇಶದಿಂದ ಮಹಾಬಲೇಶ್ವರ್ ಪ್ರದೇಶಕ್ಕೆ ತೆರಳಲು ಅನುಮತಿ ನೀಡಿದ್ದು ಮಾತ್ರವಲ್ಲದೆ ಪತ್ರವನ್ನು ಕೂಡಾ ನೀಡಿದ್ದರು. ಈ ಪತ್ರದಲ್ಲಿ ನಾಲ್ಕು ಕಾರುಗಳಿಗೆ ಅನುಮತಿ ನೀಡಿದ್ದರು.
ಈ ಕುಟುಂಬ ನನಗೆ ಪರಿಚಯವಿದೆ. ಇವರಿಗೆ ಕೌಟುಂಬಿಕ ಕಾರಣಕ್ಕಾಗಿ ಖಂಡಾಲಾದಿಂದ ಮಹಾಬಲೇಶ್ವರ್ಗೆ ತುರ್ತುಭೇಟಿ ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ನಾಲ್ಕು ಕಾರುಗಳು ಹಾಗೂ 23 ಮಂದಿಗೆ ತೆರಳಲು ಸಹಕರಿಸಬೇಕೆಂದು ತಿಳಿಸಲಾಗಿತ್ತು.
ಡಿಎಚ್ಎಫ್ಎಲ್ನ ವಾಧವನ್ ಕುಟುಂಬದ ಕಪಿಲ್ ವಾಧವನ್, ಅರುಣಾ ವಾಧವನ್, ವನಿತಾ ವಾಧವನ್, ಟೀನಾ ವಾಧವನ್, ಧೀರಜ್ ವಾಧವನ್, ಕಾರ್ತಿಕ್ ವಾಧವನ್, ಪೂಜಾ ವಾಧವನ್, ಯುವಿಕಾ ವಾಧವನ್, ಆನ್ ವಾಧವನ್, ಶುತೃಘ್ನಘಾಗಾ, ಮನೋಜ್ ಯಾದವ್, ವಿನಿದ್ ಶುಕ್ಲಾ, ಅಶೋಕ್ ವಫೇಲ್ಕರ್, ದಿವಾನ್ ಸಿಂಗ್, ಅಮೋಲ್ ಮಂಡಲ್, ಲೋಹಿತ್ ಫರ್ನಾಂಡಿಸ್, ಜಸ್ ಪ್ರೀತ್ ಸಿಂಗ್ ಅರಿ, ಜಸ್ಟಿನ್ ಡಿಮೆಲೋ, ಇಂದ್ರಕಾಂತ್ ಚೌದರಿ, ಪ್ರದೀಪ್ ಕಾಂಬ್ಳೆ, ಎಲಿಜಬೆತ್ ಅಯ್ಯಪಿಳ್ಳೈ, ರಮೇಶ್ ಶರ್ಮಾ, ತರ್ಕಾರ್ ಸರ್ಕಾರ್ ಅವರು ಮೂರು ಮಹಾರಾಷ್ಟ್ರ ನೋಂದಣಿ ಕಾರುಗಳು, ಎರಡು ಜಾರ್ಖಂಡ್ ನೋಂದಣಿ ಕಾರುಗಳಲ್ಲಿ ಪ್ರಯಾಣಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಭಾರೀ ಚರ್ಚೆಗೆ ಕಾರಣವಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ ಯಾರಿಗೂ ಮನೆಯಿಂದ ಹೊರಗೆ ಬರಲು ಅವಕಾಶವಿಲ್ಲದೆ ಇರುವಾಗ ಈ ಕುಟುಂಬಕ್ಕೆ ಮಾತ್ರ ಅನುಮತಿ ನೀಡಿರುವುದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಗೃಹ ಸಚಿವ ಅನಿಲ್ ದೇಶಮುಖ್ ಆ ಕೂಡಲೇ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶ ನೀಡಿದ್ದು ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದ್ದಾರೆ.
ಮಹಾಬಲೇಶ್ವರ್ ತಲುಪಿದಾಗ ಅಲ್ಲಿನ ಪೊಲೀಸರು ಅವರನ್ನು ತಡೆದು ಪ್ರಶ್ನಿಸಿದಾಗ ಗೃಹಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತಾ ಅವರ ಪತ್ರ ತೋರಿಸಿದ್ದು ಪೊಲೀಸರು ಈ ಸಂದರ್ಭದಲ್ಲಿ ಕಡ್ಡಾಯವಾಗಿ ನಿಯಮ ಜಾರಿಯಲ್ಲಿದೆ. ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ ಯಾರೂ ಈ ರೀತಿ ಸಂಚಾರ ಮಾಡುವಂತಿಲ್ಲ ಎಂದು ತಿಳಿಸಿದ್ದು 23 ಮಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಿದ್ದಾರೆ. ಹಾಗೆಯೇ ಇವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.