ಬೆಂಗಳೂರು, ಏ 10 (Daijiworld News/MSP): ಕೊರೊನಾ ಮಹಾಮಾರಿಗೆ ಔಷಧಿ ಕಂಡುಹಿಡಿಯಲು ವಿವಿಧ ದೇಶದ ವಿಜ್ಞಾನಿಗಳು ಪ್ರಯತ್ನಿಸುತ್ತಿರುವಾಗ, ಭಾರತ ಪಾರಂಪರಿಕ ಆಯುರ್ವೇದ ಔಷಧ ನೀಡಿ ಕರೊನಾ ಸೋಂಕು ಗುಣಪಡಿಸುವ ಕುರಿತು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಡಾ. ಗಿರಿಧರ ಕಜೆ ಅವರು ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ಪತ್ರ ಹಾಗೂ ದಾಖಲೆಗಳನ್ನು ಸಲ್ಲಿಸಿ, ಸಚಿವರಿಗೆ ಕೋವಿಡ್-19 ಔಷಧೋಪಚಾರದ ಬಗ್ಗೆ ವಿವರಣೆ ನೀಡಿದರು.
ಆಯುರ್ವೇದ ಕ್ಷೇತ್ರದಲ್ಲಿ ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದು,ಈವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವಿದೆ ಎಂದು ಸಚಿವರಿಕೆ ಮನವರಿಕೆ ಮಾಡಿದ್ದಾರೆ.
ಮಹಾಮಾರಿ ಡೆಂಗ್ಯು, ಚಿಕುನ್ ಗುನ್ಯಾ, ಹೆಚ್1 ಎನ್ 1, ಹೆಪಟೈಟಿಸ್ ಬಿ ಸೇರಿದಂತೆ ಅನೇಕ ವೈರಲ್ ರೋಗಗಳಿಗೆ ಆಯುರ್ವೇದ ಔಷಧ ಮಾತ್ರದಿಂದ ಸಹಸ್ರಾರು ರೋಗಿಗಳನ್ನು ಗುಣಪಡಿಸಿರುವುದನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದು ವೈರಾಣು ರೋಗಗಳ ಚಿಕಿತ್ಸೆಯಲ್ಲಿ ಆಯುರ್ವೇದಕ್ಕೆ ಪರಮಾಧಿಕಾರವಿದೆ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿದ್ದು, ಆಯುರ್ವೇದ ಪದ್ಧತಿಯ ಆಧಾರದಲ್ಲಿ 'ಭೌಮ್ಯ' ಹಾಗೂ 'ಸಾತ್ಮ್ಯ' ಎಂಬ ಔಷಧಗಳು 'ಕೋವಿಡ್ 19' ಅನ್ನು ಗುಣಪಡಿಸಲು ಶಕ್ತವಾಗಿವೆ. ಇವು ವೈರಾಣುನಾಶಕ ಗುಣಮಾತ್ರವನ್ನು ಹೊಂದಿರದೆ ಜ್ವರ, ಸೀನು, ಉಸಿರಾಟದ ತೊಂದರೆ ಗುಣಪಡಿಸುತ್ತವೆ, ಯಕೃತ್ ಗೆ ಬಲ ನೀಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಸಾಕ್ಷಿಯಾಗಿ 32 ಸಂಶೋಧನೆಗಳ 239 ಪುಟಗಳ ದಾಖಲೆಗಳನ್ನೂ ನೀಡಿದ್ದಾರೆ.
ಮಾತ್ರವಲ್ಲದೆ ಸರ್ಕಾರ ಬಯಸಿದರೆ, ಕ್ಲಿನಿಕಲ್ ಅಧ್ಯಯನಕ್ಕೆ ಈ ಔಷಧವನ್ನು ಉಚಿತವಾಗಿ ನೀಡಲು ಸಿದ್ಧನಿದ್ದೇನೆ. ಭಾರತದಲ್ಲಿ ಇರುವ 5 ಸಾವಿರಕ್ಕೂ ಹೆಚ್ಚು ಕೋವಿಡ್ 19 ಪಾಸಿಟಿವ್ ರೋಗಿಗಳಿಗೂ ಔಷಧವನ್ನು ಉಚಿತವಾಗಿ ನೀಡುತ್ತೇನೆ. ಕೊವೀಡ್ ಆಯುರ್ವೇದ ಔಷಧಿಯಿಂದ ಮರಣ ಪ್ರಮಾಣ ತಗ್ಗಿಸಬಹುದು. ಮಾತ್ರವಲ್ಲದೆ ಕೊರೊನಾ ವೈರಸ್ ನಿಂದ ಗುಣಪಡಿಸಬಹುದಲ್ಲದೆ, ಔಷಧೋಪಚಾರದ ಸಮಯ ಕಡಿಮೆ ಹಾಗೂ ಅಡ್ಡಪರಿಣಾಮವಿಲ್ಲ ಎಂದು ಹೇಳಿದ್ದಾರೆ.