ಬೆಂಗಳೂರು, ಎ.10 (Daijiworld News/MB) : ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ಆತಂಕ ಉಂಟಾಗಿದ್ದು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೆಲವೊಂದು ನಿರ್ದಿಷ್ಟ 'ಕೊರೊನಾ ಹಾಟ್ಸ್ಟಾಟ್' ಜಿಲ್ಲೆಗಳಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಬೆಂಗಳೂರಿನ ಶಿವಾಜಿನಗರ ಹಾಗೂ ಪಾದರಾಯಣಪುರ ಪ್ರದೇಶವನ್ನು ಸೀಲ್ಡೌನ್ ಮಾಡಿ ಬಿಬಿಎಂಪಿ ಗುರುವಾರ ಆದೇಶ ಮಾಡಿದೆ.
ರಾಜ್ಯದಲ್ಲಿ ಮಾರ್ಚ್ 9 ರ ವರೆಗೆ 197 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 68, ಮೈಸೂರು ಜಿಲ್ಲೆಯಲ್ಲಿ 37, ಮಂಗಳೂರಿನಲ್ಲಿ 12 ಪ್ರಕರಣಗಳು ದೃಢಪಟ್ಟಿವೆ. ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಹಾಗೂ ಕಲಬುರಗಿಯಲ್ಲಿ ತಲಾ 9 ಪ್ರಕರಣಗಳು ಕಾಣಿಸಿಕೊಂಡಿದೆ. ಅಲ್ಲದೆ ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಎರಡು ಬಲಿಯಾಗಿದೆ. ಬೀದರ್ ಹಾಗೂ ಬೆಳಗಾವಿಯಲ್ಲಿ ತಲಾ ಹತ್ತು ಪ್ರಕರಣಗಳು ಕಾಣಿಸಿಕೊಂಡಿವೆ. ರಾಜ್ಯದಲ್ಲಿ ಕೊರೊನಾಗೆ ಆರು ಜನರು ಬಲಿಯಾಗಿದ್ದಾರೆ.
ಬಾಗಲಕೋಟೆ ಹಾಗೂ ಮಂಡ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು ಲಾಕ್ಡೌನ್ ಅವಧಿಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಕಡಿಮೆಯಾಗದೇ ಇರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಇನ್ನು ಲಾಕ್ಡೌನ್ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು ಎಂಬ ಆದೇಶವಿದ್ದರೂ ಕೂಡಾ ಹಲವರು ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ವಾಹನಗಳಲ್ಲಿ ಸಂಚಾರ ಮಾಡಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈಗಾಗಲೇ ವಿಭಿನ್ನ ರೀತಿಗಳಲ್ಲಿ ಪ್ರಯತ್ನ ನಡೆಸಿದೆ.
ಗುರುವಾರ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮುಂದಿನ ನಿರ್ಧಾರಗಳ ಕುರಿತಾಗಿ ಚರ್ಚೆ ನಡೆದಿದ್ದು ಬಹುತೇಕ ಸಚಿವರು ಲಾಕ್ಡೌನ್ ಮುಂದುವರಿಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತಾದ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ವಿಡಿಯೋ ಸಂವಾದದ ಬಳಿಕ ನಿರ್ಧರಿಸಲಿದ್ದಾರೆ.
ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೆಲವು ಜಿಲ್ಲೆಗಳಲ್ಲಿ ಸಂಪೂರ್ಣ ಸೀಲ್ಡೌನ್ ಮಾಡಲೂ ಚಿಂತನೆ ನಡೆಸುತ್ತಿದ್ದು ಈಗಾಗಲೇ ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ ಜಿಲ್ಲೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಕೈಗೊಳ್ಳಲಾಗುತ್ತಿದೆ.
ಹಾಗೆಯೇ ಕೆಲವು ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಸಂಪೂರ್ಣ ಬಂದ್ ಮಾಡಲಾಗುತ್ತಿದ್ದು ಲಾಕ್ಡೌನ್ ಬಳಿಕ ಸೀಲ್ಡೌನ್ ಮಾಡುವ ಸಾಧ್ಯತೆಯಿದೆ.