ನವದೆಹಲಿ,ಏ 10 (Daijiworld News/MSP): ದೇಶದಲ್ಲಿ ಘೋಷಿಸಲಾಗಿರುವ 21 ದಿನಗಳ ಲಾಕ್ ಡೌನ್ ಮುಂದುವರಿಯುತ್ತಾ, ಅಥವಾ ಕೊನೆಯಾಗುತ್ತಾ ಎನ್ನುವ ಪ್ರಶ್ನೆಗೆ ದೇಶದ ಜನತೆಗೆ ನಾಳೆ ಸ್ಪಷ್ಟ ಉತ್ತರ ದೊರಕುವ ಸಾಧ್ಯತೆ ಇದೆ. ನಾಳೆ ಪ್ರಧಾನಿ ಮೋದಿ ೮ ಗಂಟೆಗೆ ದೇಶವನ್ನುದ್ದೇಶಿ ಮಾತನಾಡಲಿದ್ದು ಈ ಕುರಿತಂತೆ ದೇಶದ ಜನತೆಗೆ ಸ್ಪಷ್ಟ ಸಂದೇಶ ರವಾನಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
ಶನಿವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದು, ಈ ವೇಳೆ ಕೊರೊನಾ ನಿಯಂತ್ರಣ ಹಾಗೂ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ತೀರ್ಮಾನಕ್ಕೆ ಬರಲಿದ್ದಾರೆ.
ಇನ್ನು ಈ ನಡುವೆ ಕರ್ನಾಟಕದಲ್ಲಿ ಕೊರೊನಾ ತಡೆಗೆ ಇನ್ನು 15 ದಿನಗಳವರೆಗೆ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂಬ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ರವಾನಿಸಿದೆ. ಕೇಂದ್ರ ಸರ್ಕಾರದ ಮೂಲಗಳಿಂದ ದೊರಕಿರುವ ಮಾಹಿತಿ ಪ್ರಕಾರ, ಲಾಕ್ ಡೌನ್ ಮುಂದುವರಿಯುವ ಸಾಧ್ಯತೆಯಿದ್ದು ಆದರೆ ಈ ಬಾರಿ ಹಲವು ಬದಲಾವಣೆಗಳಾಗುವ ನಿರೀಕ್ಷೆಯಿದೆ.