ಕಲಬುರಗಿ, ಎ.10 (Daijiworld News/MB) : ಕೊರೊನಾ ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿರುವ ಕಲಬುರಗಿಯಲ್ಲಿಈಗ ಹೊಸ ಪ್ರಕರಣ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಪೀಡಿತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆದರೆ ದೆಹಲಿಗೆ ತೆರಳಿದ್ದ ವ್ಯಕ್ತಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ.
ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗೆ ಜ್ವರ, ಕೆಮ್ಮು ಬಂದ ಹಿನ್ನೆಲೆಯಲ್ಲಿ ಸ್ವತಃ ಅವರೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ ಎಂದು ವರದಿ ತಿಳಿಸಿದೆ.
ಶಹಾಬಾದ್ ಜಿಲ್ಲೆಯಿಂದ ದೆಹಲಿಯ ಮಸೀದಿಗೆ ಹೋಗಿದ್ದ 26 ಜನರನ್ನು ಪತ್ತೆ ಹಚ್ಚಲಾಗಿದ್ದು ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಈ ಪೈಕಿ ಓರ್ವ ವ್ಯಕ್ತಿಯ ಸಂಪರ್ಕದಲ್ಲಿದ್ದ ಪತ್ನಿ ಮತ್ತು ಸೊಸೆಗೆ ಸೋಂಕು ಖಚಿತವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈಗ ಇದೇ ಮಾದರಿಯಲ್ಲಿ ದೆಹಲಿಗೆ ಹೋದ ವ್ಯಕ್ತಿ ಬದಲಿಗೆ ಆತನ ಸಂಪರ್ಕಕ್ಕೆ ಬಂದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದು ಜನರಲ್ಲಿಮ ಆತಂಕ ಹೆಚ್ಚಾಗಿದೆ. ಇನ್ನು, ಸೋಂಕಿತ ವ್ಯಕ್ತಿ ಕಲಬುರಗಿ ನಗರದ ನಿವಾಸಿ ಎಂದು ಹೇಳಲಾಗುತ್ತಿದ್ದು, ಸದ್ಯ ಇಎಸ್ಐ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.