ಬೆಂಗಳೂರು, ಎ.10 (DaijiworldNews/PY) : ಸರ್ಕಾರಕ್ಕೆ ಚರ್ಚೆ ನಡೆಸಿ ನಮ್ಮ ಪಕ್ಷದ ಅಭಿಪ್ರಾಯ ತಿಳಿಸುತ್ತೇನೆ. ನಮ್ಮ ಕಾರ್ಯಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಜಿಲ್ಲಾಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇವೆ. ಕೊರೊನಾ ಪರಿಹಾರ ಕಾರ್ಯಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಜೊತೆ ನಾವು, ನೀವೆಲ್ಲರೂ ಕೈಜೋಡಿಸೋಣ. ಸರ್ಕಾರ ತೆಗೆದುಕೊಳ್ಳುವ ತೀರ್ಮಾನವನ್ನು ಗಮನಿಸುತ್ತಿದ್ದೇವೆ. ನಮ್ಮಲ್ಲಿಯೂ ಇಂದು ವರ್ಕಿಂಗ್ ಕಮಿಟಿ ಇದೆ. ನಾವೂ ಅಲ್ಲಿ ಚರ್ಚೆ ಮಾಡಿ ಅಭಿಪ್ರಾಯ ತಿಳಿಸುತ್ತೇವೆ ಎಂದು ತಿಳಿಸಿದರು.
ಅಂಬೇಡ್ಕರ್ ಜಯಂತಿ ಆಚರಣೆ ಬಗ್ಗೆ ಮಾತನಾಡಿದ ಅವರು, ನಾವು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಲೇ ಬದುಕುತ್ತಿದ್ದೇವೆ. ಹಾಗಾಗಿ ನಾವು ಜಯಂತಿ ಕಾರ್ಯಕ್ರಮವನ್ನು ಮಾಡಬೇಕು ಎಂದು ಹೇಳಿದರು
ಲಾಕ್ಡೌನ್ ಇನ್ನೂ ಮುಗಿದಿಲ್ಲ. ಹಾಗಾಗಿ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಸರಳವಾಗಿ ಆಚರಿಸೋಣ. ಏಳೆಂಟು ಜನ ಕೆಪಿಸಿಸಿಯಲ್ಲಿ ಜಯಂತಿ ಕಾರ್ಯಕ್ರಮವನ್ನು ಆಚರಿಸುತ್ತೇವೆ. ತಾವು ಇರುವಲ್ಲಿಯೇ ಉಳಿದವರು ಜಯಂತಿ ಆಚರಿಸಿ. ಅಂತರ ಕಾಯ್ದುಕೊಂಡು ಸರಳವಾಗಿ ಜಯಂತಿ ಆಚರಿಸಿ ಎಂದು ತಿಳಿಸಿದರು.