ಬೆಂಗಳೂರು, ಎ.10 (DaijiworldNews/PY) : ಲಾಕ್ಡೌನ್ ರೈತರ ಪಾಲಿಗೆ ಆತುರದ ನಿರ್ಧಾರದಂತೆ ಕಾಣುತ್ತಿದೆ. ಸರ್ಕಾರ ರೈತರ, ಕೃಷಿ ಕಾರ್ಮಿಕರ, ದಿನಗೂಲಿ ನೌಕರರ ನೆರವಿಗೆ ಧಾವಿಸಬೇಕು ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರು ಈ ವಿಚಾರವಾಗಿ ಸಿಎಂ ಬಿಎಸ್ವೈ ಅವರಿಗೆ ಪತ್ರ ಬರೆದಿದ್ದಾರೆ.
ಲಾಕ್ಡೌನ್ನಿಂದಾಗಿ ರೈತರಿಗೆ ಮಾರುಕಟ್ಟೆ ಸಿಗದೇ ಅವರ ಬದುಕು ಉರಿಯುವ ಬೆಂಕಿಯಲ್ಲಿ ಬಿದ್ದಂತಾಗಿದೆ. ಲಾಕ್ಡೌನ್ ರೈತರ ಪಾಲಿಗೆ ಆತುರದ ತೀರ್ಮಾನದಂತೆ ಕಾಣಿಸುತ್ತಿದೆ. ವೈರಾಣು ಕಾಣಿಸಿಕೊಂಡಿದ್ದರೂ ಎರಡು ತಿಂಗಳ ಕಾಲ ಸುಮ್ಮನಿದ್ದ ಸರ್ಕಾರ ಮುಂದಾಲೋಚನೆ ಇಲ್ಲದೇ ತಕ್ಷಣವೇ ಲಾಕ್ಡೌನ್ ಮಾಡಿದೆ. ರಾಜ್ಯದ ಮತ್ತು ದೇಶದ ರೈತರು ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭ ಗ್ರಾಮ ಮಟ್ಟದಲ್ಲೇ ಹಾಲು ಸಂಗ್ರಹಿಸಬೇಕಿತ್ತು. ಸರ್ಕಾರವೇ ತರಕಾರಿಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕಿತ್ತು. ಎಪಿಎಂಸಿ, ನ್ಯಾಪೆಡ್, ಹಾಪ್ ಕಾಮ್ಸ್ ಹಾಗೂ ಸಫಲ್ ಮೂಲಕ ತರಕಾರಿಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು. ತರಕಾರಿ ಸಂಗ್ರಹಣೆ ಸಾಗಾಟ , ಮಾರಾಟ ನಿಷೇಧಿಸಬಾರದು. ಸಂಸ್ಕರಣಾ ಘಟಕಗಳಿಗೆ ಪೂರ್ಣ ವಿನಾಯಿತಿಯನ್ನು ಕೊಡಬೇಕು ಎಂದರು.
ದೇಶದ ಯಾವುದೇ ಪ್ರದೇಶಕ್ಕೆ ಕೃಷಿ ಉತ್ಪನ್ನಗಳ ಅಡೆತಡೆ ಇಲ್ಲದ ಮಾರಾಟಕ್ಕೆ ಹಾಗೂ ಸಾಗಾಟಕ್ಕೆ ಅನುವು ಮಾಡಿಕೊಡಬೇಕು. ಸಂಸ್ಕರಿಸಿದ ಪದಾರ್ಥಗಳ ಹಾಗೂ ತೋಟಗಾರಿಕೆ ಉತ್ಪನ್ನ ರಫ್ಇತಗೆ ನಿರ್ಬಂಧ ಹೇರಬಾರದು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳು ಇರಬಾರದು ಎಂದು ಹೇಳಿದರು.
ಕೊರೊನಾ ವೈರಾಣುವಿನ ಸಂಕಷ್ಟದ ಸಮಯದಲ್ಲಿ ಲಾಕ್ಡೌನ್ ಪರಿಣಾಮವಾಗಿ ರಾಜ್ಯ ಹಾಗೂ ದೇಶದ ರೈತರು ಕಂಗಾಲಾಗಿದ್ದಾರೆ. ರೈತರ, ಕೃಷಿಕಾರ್ಮಿಕರ, ದಿನಗೂಲಿ ನೌಕರರ ಅನುಕೂಲಕ್ಕಾಗಿ ಸರ್ಕಾರ ಕೈಗೊಳ್ಳಬೇಕಾಗಿರುವ ಕಾರ್ಯಸೂಚಿಗಳನ್ನು @CMofKarnataka @BSYBJP ಅವರಿಗೆ ಪತ್ರ ಮುಖೇನ ತಿಳಿಸಿದ್ದೇನೆ. ನಿರ್ಲಕ್ಷ್ಯತೆಯಿಂದಾಗುವ ಅನಾಹುತಗಳಿಗೆ ಅವಕಾಶ ನೀಡಬಾರದು ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.