ನವದೆಹಲಿ, ಎ.10 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಭಾರತ ಸ್ನೇಹಿ ರಾಷ್ಟ್ರಗಳಿಗೆ ನೆರವು ನೀಡಲು ಸಿದ್ದ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದು, ಕೊರೊನಾ ಸೋಂಕಿಗೆ ಈವರೆಗೆ 95ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಸೋಂಕಿನ ವಿರುದ್ದ ಜಂಟಿಯಾಗಿ ಹೋರಾಡುವ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ವೈರಸ್ ವಿರುದ್ದ ನಾವು ಜಂಟಿಯಾಗಿ ಹೋರಾಡಬೇಕು. ನಮ್ಮ ಸ್ನೇಹಿ ರಾಷ್ಟ್ರಗಳಿಗೆ ಎಷ್ಟು ನೆರವು ನೀಡಲು ಸಾಧ್ಯವೋ ಅಷ್ಟು ನೆರವನ್ನು ನೀಡಲು ಭಾರತ ಸಿದ್ದವಾಗಿದೆ. ಇಸ್ರೇಲ್ ಜನತೆಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
ಕೊರೊನಾ ಚಿಕಿತ್ಸೆ ನೀಡಲು ಉಪಯುಕ್ತವಾಗಿರುವ ಮಲೇರಿಯಾ ನಿರೋಧಕ ಲಸಿಕೆ ಹೈಡ್ರೋಕ್ಸಿಕ್ಲೋರೊಕ್ವಿನ್ ರಫ್ತು ಮಾಡಲು ಭಾರತ ತೆಗೆದುಕೊಂಡ ತೀರ್ಮಾನವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶ್ಲಾಘಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿ ಅವರು ಈ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.
ಎ.3ರಂದು ಪ್ರಧಾನಿ ಮೋದಿ ಅವರು ಇಸ್ರೇಲ್ ಪ್ರಧಾನಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಕೊರೊನಾ ವೈರಸ್ ವಿಚಾರವಾಗಿ ಚರ್ಚೆ ನಡೆಸಿದ್ದರು. ಉಭಯ ನಾಯಕರು ಕೊರೊನಾ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸು ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು ಎಂದು ವರದಿ ತಿಳಿಸಿದೆ.