ಉಳ್ಳಾಲ, ಏ 10 (DaijiworldNews/SM): ಕೇರಳ ಕಣ್ಣೂರಿನಿಂದ 142 ಕಿ.ಮೀ. ನಡೆದುಕೊಂಡು ಬಂದು ಕರ್ನಾಟಕಕ್ಕೆ ಬಂದಿದ್ದ, ತುಂಬಿ ಗರ್ಭಿಣಿ ಸೇರಿದಂತೆ ಇಬ್ಬರು ಮಕ್ಕಳು, ನಾಲ್ವರು ಗಂಡಸರು ಹಾಗೂ ಆರು ಮಂದಿ ಹೆಂಗಸರು ಕಾಲ್ನಡಿಗೆ ಮೂಲಕವೇ ಮತ್ತೆ 454 ಕಿ.ಮೀ. ಕಾಲ್ನಡಿಗೆ ಮೂಲಕ ಸಾಗಿದ್ದು, ಇದೀಗ ಬಾಗಲಕೋಟೆ ತಲುಪಿದ್ದಾರೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ.
ಕೇರಳದಿಂದ ಮಂಗಳೂರು ಪ್ರವೇಶಿಸುತ್ತಿದ್ದಂತೆ ಜಿಲ್ಲೆಯಲ್ಲಿ ಆತಂಕ ಉಂಟಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ದೈಜಿವರ್ಲ್ಡ್ ವಾಹಿನಿ ಈ ಬಗ್ಗೆ ವರದಿ ಪ್ರಕಟಿಸುತ್ತಿದ್ದಂತೆ ಕಾರ್ಮಿಕರು ಸಾರ್ವಜನಿಕರು ಹಾಗೂ ಪೊಲೀಸರ ಕಣ್ತಪ್ಪಿಸಿ ತೆರಳಿದ್ದಾರೆ. ಬಳಿಕ ಅವರು, ಪೊಲೀಸರು ಅವರಿಗಾಗಿ ಹುಡುಕಾಡಿದ್ದಾರೆ. ಇದೀಗ ಮೊಬೈಲ್ ಲೊಕೇಷನ್ ಪತ್ತೆ ಹಚ್ಚಿದಾಗ ಇದೀಗ ಬಾಗಲಕೋಟೆಗೆ ಕಾರ್ಮಿಕರು ತಲುಪಿದ್ದಾರೆ ಎಂದು ತಿಳಿದುಬಂದಿದೆ.
ಕೇರಳ ಕಣ್ಣೂರಿನಿಂದ ಎಪ್ರಿಲ್ 5 ರಂದು ನಡೆದುಕೊಂಡು ಬಿಜಾಪುರದತ್ತ ಹೊರಡಿದ್ದ 12 ಮಂದಿ ಕಾರ್ಮಿಕ ಕುಟುಂಬ ಎಪ್ರಿಲ್ 8 ರಂದು ಮಧ್ಯಾಹ್ನ ಒಳದಾರಿಯಾಗಿ ಕರ್ನಾಟಕಕ್ಕೆ ಬಂದು ದೇರಳಕಟ್ಟೆ ತಲುಪಿದ್ದರು. ಅಲ್ಲಿನ ಮಂದಿ ಮಕ್ಕಳು ಹಾಗೂ ಗರ್ಭಿಣಿಯನ್ನು ಕಂಡು ಮಧ್ಯಾಹ್ನ ಮತ್ತು ರಾತ್ರಿ ಊಟೋಪಚಾರವನ್ನು ನಡೆಸಿ ರಾತ್ರಿ ವೇಳೆ ಕಳುಹಿಸಿಕೊಟ್ಟಿದ್ದರು. ಈ ಪೈಕಿ ಮಹಿಳೆಯೊಬ್ಬರು ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನಡೆದುಕೊಂಡು ಸಾಗುತ್ತಿದ್ದ ಕುಟುಂಬದ ಕುರಿತು ದೃಶ್ಯ ಮಾಧ್ಯಮದಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ, ಪೊಲೀಸರು ಕಾರ್ಮಿಕ ಕುಟುಂಬವನ್ನು ಸಂಪರ್ಕಿಸಿದ್ದರು.
ಆದರೆ ಹೆದರಿಕೊಂಡ ಕಾರ್ಮಿಕ ಮೊಬೈಲ್ ಸ್ವಿಚ್ ಆಫ್ ನಡೆಸಿದ್ದರು. ದಾರಿಯುದ್ದಕ್ಕೂ ಕುಟುಂಬಕ್ಕಾಗಿ ಪೊಲೀಸರು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಕುಟುಂಬ ತೊಕ್ಕೊಟ್ಟುವಿನಲ್ಲಿ ಸಿಕ್ಕ ಲಾರಿ ಮೂಲಕ ಜಿಲ್ಲೆಯನ್ನು ದಾಟಿದ್ದು, ಕಳೆದ ಎರಡು ದಿನಗಳಿಂದ ಲಾರಿಯಲ್ಲೇ ಪ್ರಯಾಣಿಸುತ್ತಿದ್ದಾರೆ. ಮಾಧ್ಯಮ ವರದಿಗೆ ಸ್ಪಂಧಿಸಿದ ಜಿಲ್ಲಾಡಳಿತ ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಗೆ ಜವಾಬ್ದಾರಿ ವಹಿಸಿತ್ತು.
ಗುರುವಾರ ಇಡೀ ದಿನ ಪೊಲೀಸ್ ಇಲಾಖೆ ಕುಟುಂಬದ ಕಾರ್ಯಾಚರಣೆ ನಡೆಸಿದರೂ ಯಾವುದೇ ಪತ್ತೆ ಕಾರ್ಯ ಸಾಧ್ಯವಾಗಿರಲಿಲ್ಲ. ಇಂದು ಕಾರ್ಮಿಕ ಮೊಬೈಲ್ ಆನ್ ಮಾಡಿದ್ದು, ಟವರ್ ಲೊಕೇಷನ್ ಬಾಗಲಕೋಟೆ ತೋರಿಸಿರುವುದಾಗಿ ದಾಖಲೆ ಲಭಿಸಿದೆ.