ಹೈದರಾಬಾದ್, ಎ.11 (Daijiworld News/MB) : ತೆಲಂಗಾಣ ರಾಜ್ಯದಲ್ಲಿ ದೃಢಪಟ್ಟಿರುವ ಕೊರೊನಾ ಪ್ರಕರಣದಲ್ಲಿ ಶೇ 85 ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಹಾಗೂ ಅವರಿಗೆ ಸಂಬಂಧಿತವಾದದ್ದು ಎಂದು ತೆಲಂಗಾಣ ಆರೋಗ್ಯ ಸಚಿವ ಇಟಾಲ ರಾಜೇಂದ್ರ ತಿಳಿಸಿದ್ದಾರೆ.
ಈ ಕುರಿತಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಈ ಮಾಹಿತಿಯನ್ನು ತಿಳಿಸಿದ್ದಾರೆ.
ಪ್ರಸ್ತುತ ಸೋಂಕಿತರು ಗುಣಮುಖರಾದ್ದಲ್ಲಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
8,500 ಮಂದಿಯ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಈ ಪೈಕಿ 471 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 45 ಮಂದಿ ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.