ಬೆಂಗಳೂರು, ಏ 11 (Daijiworld News/MSP): ಮಗುವನ್ನು ಹಿಡಿದುಕೊಂಡಿದ್ದ ಅಜ್ಜನ ಕೈಜಾರಿ ಬಿದ್ದು 6 ತಿಂಗಳ ಮಗು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಾರುತಿ ನಗರ ನಿವಾಸಿ ವಿನಯ್ ಹಾಗೂ ಪ್ರಿಯಾಂಕಾ ದಂಪತಿಯ ಪುತ್ರಿ ಅನ್ವಿ ಮೃತಪಟ್ಟ ಮಗುವಾಗಿದೆ.
ಈ ದಂಪತಿಗಳ ಮನೆ ಅಪಾರ್ಟ್ ಮೆಂಟ್ ನ ಒಂದನೇ ಅಂತಸ್ತಿನಲ್ಲಿದ್ದು, ಶುಕ್ರವಾರ ಬೆಳಗ್ಗೆ ದಂಪತಿ ಮನೆ ಸ್ವಚ್ಚಗೊಳಿಸುತ್ತಿರುವಾಗ ಮಗುವನ್ನು ವಿನಯ್ ಅವರು ತನ್ನ ಮಗುವನ್ನು ತಂದೆ ಕೈಗೆ ನೀಡಿದ್ದರು. 70 ವರ್ಷದ ವಿನಯ್ ಅವರ ತಂದೆ ಮಗುವನ್ನು ಎರಡನೇ ಮಹಡಿಗೆ ಕರೆದೊಯ್ಯಲು ಮೆಟ್ಟಿಲು ಹತ್ತುವಾಗ ಕಾಲು ಜಾರಿದ್ದಾರೆ. ಆಗ ಆಕಸ್ಮಿಕವಾಗಿ ಕೈಯಲ್ಲಿದ್ದ ಮಗು ಎರಡನೇ ಅಂತಸ್ತಿನಿಂದ ಕೆಳಗೆ ಬಿದ್ದಿದೆ.
ಮಗು ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿದೆ.
ತಕ್ಷಣ ದಂಪತಿ ಮಗುವನ್ನು ಮಲ್ಲೇಶ್ವರದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಐಸಿಯುವಿಲ್ಲದ ಕಾರಣ ಬೇರೊಂದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ