ನವದೆಹಲಿ, ಎ.11 (Daijiworld News/MB) : ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 1,035 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು 40 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಶನಿವಾರ ಬೆಳಿಗ್ಗೆ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಈವರೆಗೆ ಸೋಂಕಿಗೆ ಗುರಿಯಾದವರ ಸಂಖ್ಯೆ 7,447 ತಲುಪಿದೆ. ಮೃತರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 643 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರದಲ್ಲಿ ದೃಢಪಟ್ಟಿದ್ದು 1,574 ಜನರು ಕೊರೊನಾ ಸೋಂಕಿತರಾಗಿದ್ದು 110 ಜನ ಕೊರೊನಾಗೆ ಬಲಿಯಾಗಿದ್ದಾರೆ. 188 ಮಂದಿ ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ 207 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು 31 ಮಂದಿ ಗುಣಮುಖರಾಗಿದ್ದು 6 ಮಂದಿ ಮೃತಪಟ್ಟಿದ್ದಾರೆ.
ಇನ್ನು ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 911 ತಲುಪಿದೆ. ದೆಹಲಿಯಲ್ಲಿ 903 ಪ್ರಕರಣ ಈವರೆಗೆ ದೃಢಪಟ್ಟಿದ್ದು, ಮೃತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 25 ಮಂದಿ ಚೇತರಿಸಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ 553, ತೆಲಂಗಾಣದಲ್ಲಿ 473, ಛತ್ತೀಸಗಡ ಮತ್ತು ಚಂಡೀಗಡದಲ್ಲಿ ತಲಾ 18 ಪ್ರಕರಣ ದೃಢಪಟ್ಟಿವೆ.