ನವದೆಹಲಿ, ಏ 11 (Daijiworld News/MSP): ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಹೇರಲಾಗಿರುವ ಲಾಕ್ ಡೌನ್ ನ್ನು ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ ಎಂಬ ಸುಳಿವನ್ನು ಕೇಂದ್ರ ಬಿಟ್ಟುಕೊಟ್ಟಿದೆ. ಈ ಹಿಂದೆ ಮೋದಿ ಮಾ.25-ಏ.14 ವರೆಗೆ ೨೧ ದಿನಗಳ ಲಾಕ್ ಡೌನ್ ನ್ನು ಘೋಷಿಸಿದ್ದರು.
ದೇಶದಲ್ಲಿ ಸದ್ಯ ಹೆಚ್ಚಾಗುತ್ತಿರುವ ಕೊರೊನಾ ಪೀಡಿತರ ಸಂಖ್ಯೆಯನ್ನು ಗಮನಿಸಿ ಲಾಕ್ ಡೌನ್ ನ್ನು ಇನ್ನೂ 2 ವಾರಗಳ ಕಾಲ, ಅಂದರೆ ಏ.30 ವರೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ಹಾಗೂ ತಜ್ಞರುಗಳು, ಈಗಾಗಲೇ ಘೋಷಿಸಿರುವ ಲಾಕ್ ಡೌನ್ ನನ್ನು ಮತ್ತೆ ಒಂದಷ್ಟು ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವ ಬಗ್ಗೆ ಕೋರಿಕೊಂಡಿದ್ದರು. ಹೀಗಾಗಿ ಮತ್ತೆ ಎರಡು ವಾರಗಳ ಕಾಲ ದೇಶವ್ಯಾಪ್ತಿ ಲಾಕ್ ಡೌನ್ ಮಾಡಲಾಗುತ್ತದೆ.
ಈ ಬಳಿಕ ಅಂದರೆ ಮೇ.1 ರಿಂದ ಲಾಕ್ ಡೌನ್ ತೆರವಾದರೂ ಕೂಡಾ ಸಾರ್ವಜನಿಕ ಜೀವನವಾಗಿ , ಅರ್ಥಿಕತೆ ಮತ್ತು ಜನ ಜೀವನ ಹಿಂದಿನ ಸ್ಥಿತಿಗೆ ಮರಳುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.
ಮೂಲಗಳ ಪ್ರಕಾರ ಲಾಕ್ ಡೌನ್ ತೆರವಾದ ಬಳಿಕ ಸರ್ಕಾರವೂ ಒಂದಷ್ಟು ತಯಾರಿ ಮಾಡಿಕೊಂಡಿದ್ದು, ಮೇ 5 ರಂದು ಧಾರ್ಮಿಕ ಪ್ರದೇಶಗಳು ತೆರೆಯಲು ಹಾಗೂ ಮೇ 7 ರ ರಂದು ಹಣ್ಣು ಮತ್ತು ತರಕಾರಿ ಮಾರ್ಕೆಟ್ ಗಳು ಪರ್ಯಾಯ ದಿನಗಳಲ್ಲಿ ಕಾರ್ಯನಿರ್ವಹಣೆ ಮಾಡವಂತೆ ಯೋಜನೆ ಹಾಕಿಕೊಂಡಿದೆ.
ಮೇ.15 ರ ಬಳಿಕ ರೈಲು, ದೇಶಿ ವಿಮಾನಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಮೇ ತಿಂಗಳ ಮೂರನೇ ವಾರದ ಬಳಿಕ ಸಿನಿಮಾ ಹಾಲ್, ಮಾಲ್ ಗಳು ಕಾರ್ಯಚರಿಸಲಿದೆ. ಮೇ ಅಂತ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಪುನಾರಂಭಗೊಳ್ಳಲಿವೆ.
ಇನ್ನು ಅಂತಾರಾಷ್ಟ್ರೀಯ ವಿಮಾನಗಳನ್ನು ಜುಲೈ.30 ರಿಂದ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಇವೆಲ್ಲವನ್ನೂ ಜಾಗತಿಕ ಮಟ್ಟದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಲಾಗುತ್ತದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ಲಾಕ್ ಡೌನ್ ಗೆ ಸಂಬಂಧಿಸಿದಂತೆ ಏ.12 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.