ನವದೆಹಲಿ, ಏ 11 (Daijiworld News/MSP): ಕೊರೊನಾ ಹರಡುವುದನ್ನು ತಡೆಯಲು ದೇಶಾದ್ಯಂತ ಎ.14ರ ತನಕ ಜಾರಿಸಲಾಗಿರುವ ಲಾಕ್ ಡೌನ್ ನ್ನು ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಈ ವೇಳೆ ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಹೆಗಲಿಗೆ ಹೆಗಲು ಕೊಟ್ಟು ಹೋರಾಡೋಣ. ನೀವೇನಾದ್ರೂ ಈ ಬಗ್ಗೆ ಸಲಹೆ ಸೂಚನೆ ನೀಡಬೇಕು ಎಂದರೆ , ವಾರದ ಏಳೂ ದಿನಗಳು 24 ಗಂಟೆಯೂ ನಾನು ನಿಮಗೆ ಲಭ್ಯವಿರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವಚನ ನೀಡಿದ್ದಾರೆ.
ಇದೇ ಮೊದಲ ಬಾರಿ ಮಾಸ್ಕ್ ಧರಿಸಿ ಸಭೆ ನಡೆಸುತ್ತಿರುವ ಪ್ರಧಾನಿ , ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಕೊರೊನಾ ವಿರುದ್ದ ಸಂಘಟಿತ ಹೋರಾಟ ಮಾಡೋಣ ಎಂದು ಕರೆ ನೀಡಿದ್ದಾರೆ. ಇದರೊಂದಿಗೆಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯಗಳು ಏನೇನು ಕ್ರಮ ಕೈಗೊಂಡಿವೆ ಎಂಬ ಬಗ್ಗೆಯೂ ಅವರು ಮಾಹಿತಿ ಪಡೆಯುತ್ತಿದ್ದಾರೆ.
ಈ ವಿಡಿಯೋ ಕಾನ್ಫರೆನ್ಸ್ ಸಂಜೆ ಮೂರು ಗಂಟೆಯ ತನಕ ಮುಂದುವರಿಯಲಿದ್ದು, ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರೊಂದಿಗೆ ಪ್ರಧಾನಿ ಇನ್ನಷ್ಟೇ ಮಾತನಾಡಬೇಕಿದೆ.