ಪಾಟ್ನಾ, ಎ.11 (DaijiworldNews/PY) : ಒಂದೆಡೆ ದೇಶಾದ್ಯಂತ ಕೊರೊನಾ ವೈರಸ್ ಭೀತಿ ಕಾಡುತ್ತಿದ್ದರೆ, ಮತ್ತೊಂದೆಡೆ ಮಹಿಳೆಯರನ್ನು ಎಡೆಬಿಡದೆ ಕಾಡುತ್ತಿರುವ ಕಾಮುಕರ ಅಟ್ಟಹಾಸ. ಬಿಹಾರದ ಐಸೋಲೇಷನ್ ವಾರ್ಡ್ ನಲ್ಲಿದ್ದ ಮಹಿಳೆಯ ಮೇಲೆ ಸತತ ಎರಡು ರಾತ್ರಿ ವೈದ್ಯರು ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಸಾಂದರ್ಭಿಕ ಚಿತ್ರ
ಈ ಘಟನೆ ಬಿಹಾರ ರಾಜ್ಯದ ಗಯಾದಲ್ಲಿ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿದ್ದ ಮಹಿಳೆಯೋರ್ವರ ಮೇಲೆ ವೈದ್ಯರು ಸತತ ಎರಡು ರಾತ್ರಿ ಅತ್ಯಾಚಾರ ಎಸಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ತೀವ್ರ ರಕ್ತಸ್ರಾವದಿಂದ ಸಂತ್ರಸ್ತೆ ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಅನುಗ್ರಹ ನಾರಾಯಣ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಅಧಿಕಾರಿಗಳಿಗೆ ಸಂತ್ರಸ್ತೆಯ ಅತ್ತೆ ದೂರು ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಲಾಕ್ಡೌನ್ ನಂತರ ಮಾ.25 ರಂದು ಪಂಬಾಜ್ ರಾಜ್ಯದ ಲುಧಿಯಾನದಿಂದ ಬಿಹಾರದ ಗಯಾಕ್ಕೆ ಪತಿಯೊಂದಿಗೆ 25 ವರ್ಷದ ಸಂತ್ರಸ್ತೆ ವಾಪಾಸ್ಸಾಗಿದ್ದರು. ಸಂತ್ರಸ್ತೆ ಎರಡು ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವಾಗಿತ್ತು. ಗರ್ಭಪಾತವಾದ್ದರಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಹಾಗಾಗಿ ಮಾ.27 ರಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಆಕೆಯನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು.
ವೈರಸ್ ಶಂಕೆಯಿಂದಾಗಿ ಆಕೆಯನ್ನು ಎ.1 ರಂದು ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು. ಮಹಿಳೆ ವಾರ್ಡ್ ನಲ್ಲಿ ಒಬ್ಬಂಟಿಯಾಗಿದ್ದಳು. ಇದೇ ಸಂದರ್ಭ ತಪಾಸಣೆ ಮಾಡಲು ಬರುತ್ತಿದ್ದ ವೈದ್ಯರು ಎ.2 ಹಾಗೂ 3ರಂದು ಸತತ ಎರಡು ರಾತ್ರಿ ಅತ್ಯಾಚಾರವೆಸಗಿದ್ದಾರೆಂದು ಸಂತ್ರಸ್ತೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ವೈರಸ್ ಇಲ್ಲದಿರುವುದು ಕಂಡು ಬಂದ ಹಿನ್ನಲೆ ಮಹಿಳೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಯಿಂದ ಮನೆಗೆ ವಾಪಾಸ್ಸಾಗಿದ್ದ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದ್ದು, ಮೌನ ಹಾಗೂ ಭೀತಿಗೆ ಒಳಗಾಗಿದ್ದರು. ಮನೆಯವರು ಸಾಕಷ್ಟು ಒತ್ತಾಯ ಮಾಡಿದ ನಂತರ ಮಹಿಳೆ ನಡೆದ ಘಟನೆಯನ್ನು ತಿಳಿಸಿದ್ದಾಳೆ.
ನಂತರ ಸಂತ್ರಸ್ತೆಯ ಅತ್ತೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಆದರೆ, ಆರೋಪಿಗಳನ್ನು ಗುರುತಿಸುವಲ್ಲಿ ಸಂತ್ರಸ್ತೆ ವಿಫಲವಾಗಿದ್ದಾರೆ. ಪ್ರಸ್ತುತ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಅದಲ್ಲದೇ, ವಾರ್ಡ್ ಗೆ ತೆರಳಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.