ಕಲಬುರಗಿ, ಎ.11 (Daijiworld News/MB) : ವಿದೇಶದಿಂದ ಮರಳಿ ಬಂದವರು ಹಾಗೂ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲಿಘಿ ಎ- ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಸ್ವಯಂ ಮಾಹಿತಿ ನೀಡದಿದ್ದರೆ ಅವರ ಮೇಲೆ ಮೊಕದ್ದಮೆ ದಾಖಲಿಸಿ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯಾರೇ ಆದರೂ ತಮ್ಮ ಪ್ರವಾಸದ ಮಾಹಿತಿ ನೀಡದಿದ್ದರೆ ಪ್ರಕರಣ ದಾಖಲು ಮಾಡಿ, ಕಠಿಣ ಕ್ರಮಕೈಗೊಳ್ಳಿ. ಈಗಾಗಲೇ 14 ದಿನ ಹೋಂ ಕ್ವಾರಂಟೈನ್ ಮುಗಿದವರಿಗೆ ಇನ್ನೂ 14 ದಿನ ಹೋಂ ಕ್ವಾರಂಟೈನ್ನಲ್ಲಿ ಇರಿಸಿ ನಿಗಾ ವಹಿಸಿ ಎಂದು ತಿಳಿಸಿದ್ದಾರೆ.
ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಯಾರೂ ಕೂಡಾ ಉಪವಾಸ ಇರಬಾರದು. ಹೊಸದಾಗಿ ಪಡಿತರ ಚೀಟಿಗಾಗಿ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ 15,799 ಅರ್ಜಿದಾರರಿಗೆ ತಾತ್ಕಾಲಿಕ ಪಡಿತರ ಚೀಟಿ ನೀಡಿ ಎರಡು ತಿಂಗಳ ಕಾಲ ಆಹಾರ ಧಾನ್ಯ ನೀಡಬೇಕು ಎಂದು ತಿಳಿಸಿದರು.
ಹಾಗೆಯೇ ಪಡಿತರಕ್ಕೆ ಹಣ ಪಡೆಯುವ ಹಾಗೂ ಕಡಿಮೆ ಪಡಿತರ ನೀಡುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ಕೂಡಲೇ ರದ್ದು ಪಡಿಸಬೇಕು. ಆ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಸೊಸೈಟಿ ಮೂಲಕ ಪಡಿತರ ವಿತರಿಸಲು ಕ್ರಮ ವಹಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.