ಬೆಂಗಳೂರು, ಎ.11 (Daijiworld News/MB) : ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಏಪ್ರಿಲ್ 14 ರವರೆಗೆ ಮಾಡಲಾಗಿದ್ದ ಲಾಕ್ಡೌನ್ ರಾಜ್ಯದಲ್ಲಿ ಏ.30 ವರೆಗೆ ಮುಂದುವರಿಕೆ ಮಾಡಲಾಗಿದೆ. ಆದರೆ ಮೀನುಗಾರಿಕೆಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ.
ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಇಂದು ನಾಲ್ಕು ಗಂಟೆಗಳ ಕಾಲ ಪ್ರಧಾನಿ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ದೇಶದ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಗಳೆಲ್ಲರೂ ಲಾಕ್ಡೌನ್ ಮುಂದುವರಿಸುವಂತೆ ಒತ್ತಾಯ ಮಾಡಿದ್ದೇವೆ. ರಾಜ್ಯದಲ್ಲಿ ಲಾಕ್ಡೌನ್ ಮುಂದುವರಿಸಲಾಗುತ್ತದೆ ಎಂದು ಹೇಳಿದರು.
ಆದರೆ ಮೀನುಗಾರಿಕೆಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು ಇದರಿಂದಾಗಿ ಕರಾವಳಿ ಜಿಲ್ಲೆಗೆ ಕೊಂಚ ಸಮಾಧಾನವಾಗಿದೆ.
ಮುಂದಿನ 15 ದಿನ ಲಾಕ್ಡೌನ್ ವಿಭಿನ್ನವಾಗಿರಲಿದೆ. ಆದರೆ ಅದರ ಪಾಲನೆಯ ವಿಚಾರವಾಗಿ ಯಾವುದೇ ರಾಜಿಯಿಲ್ಲ. ಆರ್ಥಿಕ ಚಟುವಟಿಕೆಗೆ ಅನುಕೂಲವಾಗುವಂತೆ ಕೆಲವು ವಿನಾಯಿತಿ ನೀಡುವ ಬಗ್ಗೆ ಪ್ರಧಾನಿ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳನ್ನು ಸದ್ಯ ಮುಚ್ಚಲಾಗಿದ್ದು. ಭಾಗಶಃ ಆರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ತಿಳಿಸಲಿದೆ. ಕೃಷಿ, ಕೈಗಾರಿಕೆ, ಕಾರ್ಮಿಕರಿಗೆ ಉದ್ಯೋಗಕ್ಕೆ ಅನುಕೂಲ ಕಲ್ಪಿಸುವ ಜತೆಗೆ ಸರ್ಕಾರಿ ಕಚೇರಿಗಳನ್ನು ಭಾಗಶಃ ಆರಂಭಿಸಲು ಅನುಮತಿ ನೀಡಲಾಗುವುದು ಎಂದರು.
ಪ್ರಧಾನ ಮಂತ್ರಿ ಆಯಾ ರಾಜ್ಯಗಳ ಸ್ಥಿತಿಗತಿ ಬಗ್ಗೆ ತಿಳಿದುಕೊಂಡಿದ್ದಾರೆ. ಹಾಗೆಯೇ ದೇಶದಲ್ಲಿ ಸೋಂಕು ಹೆಚ್ಚುತ್ತಿರುವ ಕುರಿತಾಗಿ ಕಳವಳ ವ್ಯಕ್ತಪಡಿಸಿದರು. ಪ್ರಮುಖವಾಗಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ಪ್ರಧಾನಿ ಎಚ್ಚರ ವಹಿಸಲು ಸೂಚಿಸಿದ್ದಾರೆ ಎಂದರು.
2.84 ಲಕ್ಷ ಪಿಪಿಇ ಕಿಟ್ ಹಾಗೂ ಎರಡು ದಿನಕ್ಕೊಮ್ಮೆ 29 ಲಕ್ಷ ಮಾಸ್ಕ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ. ದೇಶದಾದ್ಯಂತ ಇದುವರೆಗೆ ಕೊರೊನಾ ಸೋಂಕು ಪತ್ತೆಗೆ 220 ಲ್ಯಾಬ್ ಗಳಿದ್ದು ಏಪ್ರಿಲ್ ಅಂತ್ಯಕ್ಕೆ 300 ಲ್ಯಾಬ್ ಆರಂಭಿಸುವ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ. ಕೃಷಿಕರಿಗೆ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ. ಅದೇ ರೀತಿ ಮೀನುಗಾರರಿಗೂ ಸಹ ವಿನಾಯಿತಿ ನೀಡಲಾಗಿದೆ. ಕೊರೊನಾ ವಿರುದ್ಧ ಅವಿರತ ದುಡಿಯುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ವಿರುದ್ದ ದೌರ್ಜನ್ಯ ನಡೆದರೆ ಕಠಿಣ ಕ್ರಮ ಜರುಗಿಸಲು ಪ್ರಧಾನಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.
ಹಾಗೆಯೇ ಆರೋಗ್ಯ ಸೇತು ಮೊಬೈಲ್ ಅನುಷ್ಟಾನಕ್ಕೆ ಹೆಚ್ವಿನ ಒತ್ತು ನೀಡಲು ಸಲಹೆ ನೀಡಿದ್ದಾರೆ. ಕಾಳಸಂತೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಕಳೆದ ಮೂರು ವಾರಗಳಿಗಿಂತ ಮುಂದಿನ ಎರಡು ವಾರಗಳ ಲಾಕ್ಡೌನ್ ಭಿನ್ನವಾಗಿರುತ್ತದೆ ಎಂದು ತಿಳಿಸಿದರು.