ಚಿಕ್ಕಮಗಳೂರು, ಎ.11 (DaijiworldNews/PY) : ದೇಶವೇ ಕೊರೊನಾ ಆತಂಕದಲ್ಲಿ ಲಾಕ್ಡೌನ್ ಆಗಿದ್ದು, ಸರ್ಕಾರವು ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ. ಇಂತವರಿಗೆ ಪಾಸ್ ನೀಡಿದೆ. ಆದರೆ ಇದೇ ಪಾಸ್ಗಳನ್ನು ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದಲ್ಲಿ ಅಪ್ರಾಪ್ತ ವಯಸ್ಕನೊಬ್ಬ ಸರ್ಕಾರದ ಪಾಸ್ಗಳನ್ನೇ ನಕಲಿ ಮಾಡಿ ಮಾರಿದ್ದಾನೆ. ಲಾಕ್ಡೌನ್ ಸಂದರ್ಭ ಸಂಚರಿಸಲು ಪಾಸ್ ಪಡೆಯಬೇಕೆಂದು ನಕಲಿ ಪಾಸ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಅಪ್ರಾಪ್ತನ ಈ ಕೆಲಸಕ್ಕೆ ಆತನ ತಾಯಿಯ ಬೆಂಬಲವೂ ಇದೆ ಎಂದು ಹೇಳಲಾಗುತ್ತಿದ್ದು, ನೂರಾರು ಪಾಸ್ಗಳನ್ನು ಈಗಾಗಲೇ ಮಾರಾಟ ಮಾಡಿರುವ ಆರೋಪಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಈತನಿಂದ ಪಾಸ್ ಖರೀದಿಸಿದ್ದ ಮತ್ತೋರ್ವ ಗ್ರಾಹಕನನ್ನೂ ಕೂಡಾ ವಶಕ್ಕೆ ಪಡೆದುಕೊಂಡಿದ್ದಾರೆ. ನಕಲಿ ಪಾಸ್ ಮಾಡಿ ಮಾರಾಟ ಮಾಡಿರುವ ಈತ ಒಂದು ಪಾಸ್ಗೆ ಪಾಸ್ಗೆ 500 ರಿಂದ 1000 ರೂಪಾಯಿವರೆಗೂ ಹಣ ಪೀಕಿದ್ದಾನೆ. ಪೊಲೀಸರು ಇದೀಗ ನಕಲಿ ಪಾಸ್ ಮಾರಾಟ ಮಾಡಿದವನನ್ನು ಹಾಗೂ ಆತನ ತಾಯಿಯನ್ನು ಬಂಧಿಸಿದ್ದಾರೆ.