ಚಿಕ್ಕಮಗಳೂರು, ಏ 11 (Daijiworld News/MSP): ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗಳಿಗೆ ಬಿಡುಗಡೆಯಾಗಿರುವ ಸಹಾಯ ಧನದ ಹಣವನ್ನು ಯಾವುದೇ ಬ್ಯಾಂಕ್ಗಳು ಸಾಲದ ಉದ್ದೇಶಕ್ಕಾಗಿ ಕಡಿತ ಮಾಡಬಾರದು, ಕಡಿತ ಮಾಡಿದಲ್ಲಿ ಅಂತಹ ಬ್ಯಾಂಕುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಹೇಳಿದರು.
ಕೇಂದ್ರ ಸರ್ಕಾರದಿಂದ ರೈತರ ಖಾತೆಗಳಿಗೆ ಕಿಸಾನ್ ಸಮ್ಮಾನ್ ಯೋಜನೆ ಅಡಿ ಹಣ ಬಿಡುಗಡೆಯಾಗಿದ್ದು, ಕೆಲ ಬ್ಯಾಂಕುಗಳಲ್ಲಿ ಆ ಹಣವನ್ನು ಸಾಲಕ್ಕಾಗಿ ಕಡಿತ ಮಾಡಿಕೊಳ್ಳುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು ಹಾಗಾಗಿ ಅದಕ್ಕೆ ಅವಕಾಶವಿಲ್ಲ. ಅಂತಹ ದೂರುಗಳು ಕಂಡು ಬಂದಲ್ಲಿ ಬ್ಯಾಂಕ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಎನ್.ಆರ್.ಇ.ಜಿ ಯೋಜನೆ ಅಡಿ ಸರ್ಕಾರದಿಂದ ಹಣ ಬಿಡುಗಡೆಯಾಗಲಿದ್ದು ಕೆಲಸ ನಿರ್ವಹಿಸಿದವರ ಮಾಹಿತಿಯನ್ನು ಕಂಪ್ಯೂಟರ್ಗಳಲ್ಲಿ ಫೀಡ್ ಮಾಡಿದರೆ ಅವರ ಖಾತೆಗಳಿಗೆ ಕೆಲವೇ ದಿನಗಳಲ್ಲಿ ಹಣ ಜಮಾ ಆಗುವುದು ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಗಳ
ಅಡಿಯಲ್ಲಿ ಕೆಲಸ ನಿರ್ವಹಿಸುವ ಪ್ರತಿ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು ಹಾಗೂ ವೈಯಕ್ತಿಕ ಕೆಲಸಗಳಾದ ಬದು ನಿರ್ಮಾಣ, ಕೃಷಿ ಹೊಂಡ, ಕೊಟ್ಟಿಗೆ ನಿರ್ಮಾಣ, ಹಾಗೂ ಇಂಗು ಗುಂಡಿಗಳಂತಹ ಕೆಲಸವಿದ್ದಲ್ಲಿ ಅವಕಾಶ ನೀಡಬೇಕು ಕೃಷಿ ಚಟುವಟಿಕೆಗಳು, ಆಹಾರೋತ್ಪನ್ನ ಮಾರಾಟ ಹಾಗೂ ಸಾಗಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು.