ನವದೆಹಲಿ, ಎ.12 (Daijiworld News/MB) : ಕೊರೊನಾ ಸೋಂಕಿತರ ಚಿಕಿತ್ಸೆ ಮಾಡುವ ವೈದ್ಯರಿಗೂ ಸುರಕ್ಷತೆ ಬಲು ಮುಖ್ಯವಾಗಿದ್ದು ವೈದ್ಯರು ರೋಗಿಯಿಂದ ಕೊಂಚ ದೂರವೇ ನಿಂತು ಅವರ ಎದೆ ಬಡಿತ ಕೇಳಿಸಿಕೊಳ್ಳಬಹುದಾದಂತಹ ಡಿಜಿಟಲ್ ಸ್ಟೆತಾಸ್ಕೋಪ್ ಒಂದನ್ನು ಐಐಟಿ-ಬಾಂಬೆಯ (ಐಐಟಿ-ಬಿ) ಸಂಶೋಧಕರು ಕಂಡುಹಿಡಿದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಂಶೋಧಕರು ಬ್ಲೂ ಟೂತ್ ಸಾಧನದ ಮೂಲಕ ರೋಗಿಯ ಎದೆಬಡಿತದ ಸದ್ದು ವೈದ್ಯರಿಗೆ ಕೇಳಿಸುತ್ತದೆ. ಹೀಗಾಗಿ ವೈದ್ಯರು ರೀಡಿಂಗ್ ತೆಗೆದುಕೊಳ್ಳಲು ರೋಗಿಯ ಹತ್ತಿರವೇ ಹೋಗಬೇಕೆಂದಿಲ್ಲ. ಈ ಸಾಧನ ಬಳಸುವುದರಿಂದ ಸೋಂಕಿತ ವ್ಯಕ್ತಿಯಿಂದ ವೈದ್ಯರಿಗೆ ವೈರಸ್ ಅಂಟಿಕೊಳ್ಳುವ ಅಪಾಯ ಇರುವುದಿಲ್ಲ ಎಂದು ಹೇಳುತ್ತಾರೆ.
ಹಾಗೆಯೇ ಐಐಟಿ-ಬಿ ತಂಡವು ಈ ಸಾಧನದ ಪೇಟೆಂಟ್ ಪಡೆದಿದ್ದು, ರೋಗಿಯ ದೇಹದಿಂದ ಅಗತ್ಯವಿರುವ ಸದ್ದುಗಳನ್ನು ರೆಕಾರ್ಡ್ ಮಾಡಿ, ರೋಗಿಯ ಆರೋಗ್ಯ ದಾಖಲೆಗಳಿಗೆ ಸಂಬಂಧಿಸಿದಂತೆ ಅದನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನೂ ಹೊಂದಿದೆ. ಇಂತಹ 1000 ಸ್ಟೆತಾಸ್ಕೋಪ್ಗಳನ್ನು ಈಗಾಗಲೇ ದೇಶದ ವಿವಿಧ ಆಸ್ಪತ್ರೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಬಳಸಲಾಗುತ್ತಿದೆ ಎಂದು ತಂಡ ತಿಳಿಸಿದೆ.