ನವದೆಹಲಿ, ಎ.12 (Daijiworld News/MB) : ಕೊರೊನಾ ವೈರಸ್ ನಿಯಂತ್ರಣಕ್ಕೆಂದು ಲಾಕ್ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಈ ವರ್ಷದ ಏಸುಕ್ರಿಸ್ತ ಪುನರುತ್ಥಾನದ ಈ ದಿನ ಈಸ್ಟರ್ ಭಾನುವಾರ ಮನೆಯಲ್ಲಿಯೇ ಆಚರಣೆ ಮಾಡಬೇಕಾಗಿದೆ. ಪ್ರತಿ ವರ್ಷವೂ ಚರ್ಚ್ಗಳಲ್ಲಿ ಭಕ್ತಾಧಿಗಳು ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಆದರೆ ಈ ಬಾರಿ ಕೊರೊನಾ ಭೀತಿ ಈಸ್ಟರ್ ಸಂಭ್ರಮಕ್ಕೆ ತಡೆಯಾಗಿ ಪರಿಣಮಿಸಿದೆ.
ಈಸ್ಟರ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಎಲ್ಲರಿಗೂ ಶುಭ ಕೋರಿದ್ದು, ಎಲ್ಲರಿಗೂ ಈಸ್ಟರ್ನ ಈ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ನಾವು ಕ್ರಿಸ್ತನ ಉದಾತ್ತ ಆಲೋಚನೆಗಳನ್ನು ಸ್ಮರಿಸುತ್ತೇವೆ. ವಿಶೇಷವಾಗಿ ಬಡವರು ಮತ್ತು ನಿರ್ಗತಿಕರನ್ನು ಸಬಲೀಕರಣಗೊಳಿಸುವ ಅವರ ಅಚಲ ಬದ್ಧತೆಯನ್ನು ನೆನೆಯುತ್ತೇವೆ. ಕೊರೊನಾ ವೈರಸ್ ವಿರುದ್ಧ ಯಶಸ್ವಿಯಾಗಿ ಜಯ ಸಾಧಿಸಲು ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸಲು ಈಸ್ಟರ್ ನಮಗೆ ಹೆಚ್ಚಿನ ಶಕ್ತಿಯನ್ನು ನೀಡಲಿ ಎಂದು ಟ್ಟೀಟ್ ಮಾಡಿದ್ದಾರೆ.
ಇನ್ನು ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಈಸ್ಟರ್ಗೆ ಶುಭ ಕೋರಿದ್ದು ಈಸ್ಟರ್ನ ಶುಭ ಸಂದರ್ಭಕ್ಕೆ ನನ್ನ ಶುಭಾಶಯಗಳು ಎಂದಿದ್ದಾರೆ.
ಯೇಸು ಕ್ರಿಸ್ತ ಗುಡ್ ಫ್ರೈಡೇಯಂದು ಶಿಲುಬೆಗೇರಿದ ನಂತರ ಪುನರುತ್ಥಾನಗೊಂಡ ದಿನವಾದ ಭಾನುವಾರವನ್ನು ಈಸ್ಟರ್ ಆಗಿ ಆಚರಿಸಲಾಗುತ್ತದೆ. ಅಲ್ಲದೆ, 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ, ಪಾಪ ನಿವೇದನೆಯನ್ನು ಸೂಚಿಸುತ್ತದೆ.
ಕೊರೊನಾ ವೈರಸ್ನಿಂದಾಗಿ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಈಸ್ಟರ್ ಕಳೆಗುಂದಿದೆ.