ಚಂಡೀಗಢ, ಎ.12 (Daijiworld News/MB) : ನಿಹಾಂಗ್ (ಶಸ್ತ್ರಗಳನ್ನು ಹೊಂದಿರುವ) ಸಿಖ್ಖರ ಗುಂಪೊಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್(ಎಎಸ್ಐ)ನ ಕೈ ಕತ್ತಿರಿಸಿದ ಘಟನೆ ಪಂಜಾಬ್ನ ಪಟಿಯಾಲ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.
ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ನಿಹಾಂಗ್ ಸಿಖ್ಖರ ಗುಂಪನ್ನು ತಡೆದಿದ್ದು ಲಾಕ್ಡೌನ್ ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಈ ಗುಂಪು ತಪ್ಪಿಸಲು ಯತ್ನಿಸಿದ್ದು ಪೊಲೀಸರತ್ತ ವಾಹನ ನುಗ್ಗಿಸಲೂ ಯತ್ನಿಸಿದೆ. ನಂತರ ಪೊಲೀಸರ ಮೇಲೆ ದಾಳಿ ನಡೆಸಿದೆ ಎಂದು ಪಟಿಯಾಲ ಜಿಲ್ಲಾ ಎಸ್ಪಿ ಮಂದೀಪ್ ಸಿಂಗ್ ಸಿದು ತಿಳಿಸಿದ್ಧಾರೆ.
ಘಟನೆಯಲ್ಲಿ ಎಎಸ್ಐ ಕೈ ಕತ್ತರಿಸಲಾಗಿದೆ. ಈ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ. ಕೈ ಕತ್ತರಿಸಲ್ಪಟ್ಟ ಪೊಲೀಸ್ ಅಧಿಕಾರಿಯನ್ನು ಹರ್ಜೀತ್ ಸಿಂಗ್ ಅವರನ್ನು ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಅವರನ್ನು ಚಂಡೀಗಡದ ಪಿಜಿಐಎಂಇಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂದೀಪ್ ಸಿಂಗ್ ತಿಳಿಸಿದ್ದಾರೆ.
ಕುರಿತು ಪ್ರತಿಕ್ರಿಯೆ ನೀಡಿರುವ ಡಿಜಿಪಿ ದಿನಕರ್ ಗುಪ್ತಾ, ಘಟನೆಯು ದುರದೃಷ್ಟಕರ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.