ಜಮ್ಮು-ಕಾಶ್ಮೀರ, ಎ.12 (DaijiworldNews/PY) : ಮಹಾಮಾರಿ ಕೊರೊನಾ ವೈರಸ್ ಸೋಂಕು ವ್ಯಾಪಿಸುವ ಭೀತಿ ಹಿನ್ನೆಲೆಯಲ್ಲಿ ಸುಮಾರು 65 ಮಂದಿ ಕೈದಿಗಳನ್ನು ಜಮ್ಮು-ಕಾಶ್ಮೀರದಲ್ಲಿನ ಇಕ್ಕಟ್ಟಾದ ಜೈಲುಗಳಿಂದ ಬಿಡುಗಡೆಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪೈಕಿ ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ 22 ಮಂದಿ ಇದ್ದಾರೆ.
ಜೈಲಿನ ಮಹಾ ನಿರ್ದೇಶಕ ಹೈಕೋರ್ಟ್ ಗೆ ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಲಿಖಿತ ವರದಿಯನ್ನು ಸಲ್ಲಿಸುವ ಮೂಲಕ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಪೀಠದ ಜಸ್ಟೀಸ್ ಗೀತಾ ಮಿತ್ತಲ್ ಮತ್ತು ಜಸ್ಟೀಸ್ ರಜನೀಶ್ ಓಸ್ವಾಲ್ ನೇತೃತ್ವದ ಪೀಠ ಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಪಿಐಎಲ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಿದೆ.
ಜೈಲಿನ ಮಹಾ ನಿರ್ದೇಶಕರಿಗೆ ಎ.7ರಂದು ಕೈದಿಗಳ ಬಿಡುಗಡೆಗೆ ಸಂಬಂಧಿಸಿದಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸಿ, ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸಿ, ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ ಬಂಧಿಸಲ್ಪಟ್ಟ 22 ಮಂದಿ, ವಿಚಾರಣಾಧೀನ 32 ಕೈದಿಗಳು, ಅಪರಾಧ ದಂಡ ಸಂಹಿತೆ 107, 109, 151 ಅಡಿ ವಿಚಾರಣೆ ಎದುರಿಸುತ್ತಿದ್ದ 9 ಮಂದಿಯನ್ನು ಬಿಡುಗಡೆಗೊಳಿಸಲು ಶಿಫಾರಸು ಮಾಡಿದೆ. ಪೆರೋಲ್ ಮೇಲೆ 19ಕೈದಿಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಿದೆ ಎಂದು ವರದಿ ತಿಳಿಸಿದೆ.
ಕೊರೊನಾ ವೈರಸ್ ಭೀತಿಯಿಂದ ಜಮ್ಮು-ಕಾಶ್ಮೀರ ಸರ್ಕಾರವು ಕೇಂದ್ರಾಡಳಿತ ಪ್ರದೇಶದಾದ್ಯಂತ ಇರುವ ಇಕ್ಕಟ್ಟಾದ ಜೈಲುಗಳಿಂದ ವಿಚಾರಣಾಧೀನ ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆಗೊಳಿಸಲು ಮಾ.30ರಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ತೀರ್ಮಾನಿಸಿತ್ತು.